Chikkaballapur : ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ACC Cement ಆಶ್ರಯದಲ್ಲಿ ಬುಧವಾರ ‘2024-25 ನೇ ಸಾಲಿನ ವಾರ್ಷಿಕ ಪರೀಕ್ಷೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ’ (SSLC Examination District Level KDP Meeting) ಮತ್ತು ‘ವಿದ್ಯಾರ್ಥಿಗಳಿಗೆ ಕಲಿಕಾ ಸಮೃದ್ಧಿ ಪುಸ್ತಕ ಹಸ್ತಾಂತರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಮಾತನಾಡಿ, “ಈವರೆಗೆ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯ ಮೂರನೇ ಹಂತದ ಪರಿಶೀಲನೆ ನಡೆದಿದ್ದು, ಯಶಸ್ವಿಯಾಗಿ ಫಲಿತಾಂಶವನ್ನು ಉತ್ತಮಗೊಳಿಸಲು ವಿವಿಧ ಸಭೆಗಳು ನಡೆಯುತ್ತಿವೆ. ಶಾಲೆಗಳ ಫಲಿತಾಂಶದ ಹಿನ್ನಡೆಯಾದರೆ, ಜಿಲ್ಲಾಡಳಿತವು ಹೊಣೆಗಾರಿಕೆ ವಹಿಸಬೇಕಾಗಿದೆ. ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳಿಗೆ ಪ್ರಗತಿಶೀಲ ವಿದ್ಯಾರ್ಥಿಗಳೊಂದಿಗೆ ಸಂಯೋಜನೆ ಮಾಡಿ, ಅವರಲ್ಲಿ ಆತ್ಮವಿಶ್ವಾಸ ಹುಟ್ಟುಹಾಕಬೇಕು.ಮಕ್ಕಳಿಗೆ ಸರಳವಾಗಿ ಕಲಿಕೆ ಮಾಡಿಸಿ, ಅವರ ಬರವಣಿಗೆ ಶೈಲಿಯನ್ನು ಸರಿಪಡಿಸಬೇಕು. ಮಕ್ಕಳಿಗೆ ಪರೀಕ್ಷಾ ಭಯ ತಲುಪದಂತೆ, ಪ್ರೇರಣಾ ತರಗತಿಗಳನ್ನು ಆಯೋಜಿಸಬೇಕು. ಶಿಕ್ಷಕರು ಪ್ರತಿ ತಿಂಗಳೂ ತಾಲ್ಲೂಕು ಮಟ್ಟದಲ್ಲಿ ಶಿಕ್ಷಕರ ಸಭೆಗಳನ್ನು ಆಯೋಜಿಸಿ, ವಿದ್ಯಾರ್ಥಿಗಳ ಪ್ರಗತಿ ಕುರಿತು ಚರ್ಚೆ ನಡೆಸಬೇಕು” ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಿಸುವ ನಿಟ್ಟಿನಲ್ಲಿ 5000 ಸಾವಿರ ವಿದ್ಯಾರ್ಥಿಗಳಿಗೆ 30,000 ಕಲಿಕಾ ಸಂಜೀವಿನಿ ಪುಸ್ತಕಗಳನ್ನು ವಿತರಿಸಿದ ಎಸಿಸಿ ಸಿಮೆಂಟ್ ಕಂಪನಿ ವ್ಯವಸ್ಥಾಪಕ ಪ್ರಶಾಂತ್ ದೇಶ್‌ಮುಖ್ ಅವರನ್ನು ಅಭಿನಂದಿಸಲಾಯಿತು.
ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಶಾಲಾ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕ ಮುನಿಕೆಂಪೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್ ಸುಕನ್ಯಾ, ಉಮಾದೇವಿ, ವೆಂಕಟೇಶಪ್ಪ, ಶ್ರೀನಿವಾಸ್ ಮೂರ್ತಿ, ಕೃಷ್ಣಪ್ಪ, ನರೇಂದ್ರ ಕುಮಾರ್, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಶಾಲೆಗಳ ಮುಖ್ಯ ಶಿಕ್ಷಕರು ಸಭೆಯಲ್ಲಿ ಪಾಲ್ಗೊಂಡಿದ್ದರು.