Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸೋಮವಾರ ಹನುಮ ಜಯಂತಿ (Hanuma Jayanthi) ಯ ಪ್ರಯುಕ್ತ ವಾಯುಪುತ್ರನ ದೇವಸ್ಥಾನಗಳಲ್ಲಿ ಶ್ರದ್ಧಾಭಕ್ತಿ ಮತ್ತು ಸಡಗರದಿಂದ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ದೇವಾಲಯಗಳಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಅಭಿಷೇಕಗಳನ್ನು ಮಾಡಿ ಸಿಹಿಯನ್ನು ಪ್ರಸಾದವಾಗಿ ಹಂಚಲಾಯಿತು.
ಚಿಕ್ಕಬಳ್ಳಾಪುರ
ನಗರದ ಹೊರವಲಯದ ಆದಿಚುಂಚನಗಿರಿ ಶಾಖಾ ಮಠ (Adichunchanagiri) ದ ವೀರಾಂಜನೇಯಸ್ವಾಮಿ ದೇವಾಲಯದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಹನುಮ ಜಯಂತಿ ಆಚರಿಸಲಾಯಿತು. ನಿರ್ಮಲಾನಂದನಾಥ ಸ್ವಾಮೀಜಿ ಅವರು ಆಂಜನೇಯ ಮೂರ್ತಿಗೆ ಅಭಿಷೇಕ, ಪೂಜೆ ನೆರವೇರಿಸಿ ಹೋಮವನ್ನು ನಡೆಸಿದರು.
ನಗರದಲ್ಲಿ ಎಚ್.ಎಸ್. ಗಾರ್ಡನ್ ನ ಆಂಜನೇಯಸ್ವಾಮಿ ದೇವಾಲಯ, ಗಂಗಮ್ಮನ ಗುಡಿ ಬೀದಿಯಲ್ಲಿರುವ ಪೇಟೆ ಆಂಜನೇಯಸ್ವಾಮಿ ದೇವಾಲಯ, ಹಳೇ ಪೊಲೀಸ್ ಠಾಣೆ ರಸ್ತೆಯ ಜೀವಾಂಜನೇಯಸ್ವಾಮಿ, ಇಂದಿರಾ ನಗರದ ಅಭಯ ಆಂಜನೇಯಸ್ವಾಮಿ, ಹಳೇ ಜಿಲ್ಲಾಸ್ಪತ್ರೆಯ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಅನೇಕ ಕಡೆಗಳಲ್ಲಿ ಹನುಮನ ಆರಾಧನೆ ಸಡಗರ ಮತ್ತು ಶ್ರದ್ಧೆಯಿಂದ ಜರುಗಿತು.
ಶಿಡ್ಲಘಟ್ಟ
Sidlaghatta : ನಗರದ ಕೋಟೆ ಆಂಜನೇಯ ದೇವಾಲಯದಲ್ಲಿ ಹನುಮನಿಗೆ ವಿಶೇಷ ಬೆಣ್ಣೆ ಅಲಂಕಾರ ಮಾಡಲಾಗಿತ್ತು.
ತಾಲ್ಲೂಕಿನ ಚೌಡಸಂದ್ರ ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ತಾಲ್ಲೂಕಿನ ನಾಗಮಂಗಲ ಗ್ರಾಮದಲ್ಲಿರುವ ಚೋಳರ ಕಾಲದ ಅಭಯ ಹಸ್ತಾಂಜನೇಯಸ್ವಾಮಿ ದೇವಾಲಯದಲ್ಲಿ, ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ, ಅಪ್ಪೇಗೌಡನಹಳ್ಳಿ ಗೇಟ್ ಬಯಲಾಂಜನೇಯ ಸ್ವಾಮಿ ದೇವಾಲಯ, ದೊಡ್ಡದಾಸರ ಹಳ್ಳಿಯ ಮುತ್ತಾಂಜನೇಯ ಸ್ವಾಮಿ ದೇವಾಲಯ, ಮಯೂರ ವೃತ್ತದ ಆಂಜನೇಯಸ್ವಾಮಿ, ಚಿಂತಾಮಣಿ ರಸ್ತೆಯಲ್ಲಿರುವ ವೀರಾಂಜನೇಯಸ್ವಾಮಿ ದೇಗುಲ, ಮುತ್ತೂರು ಗ್ರಾಮ, ಎಚ್.ಕ್ರಾಸ್, ಚೊಕ್ಕಂಡಹಳ್ಳಿ, ಎದ್ದಲತಿಪ್ಪೇನಹಳ್ಳಿ, ಜಂಗಮಕೋಟೆ ಕ್ರಾಸ್ ಮುಂತಾದೆಡೆ ಶ್ರದ್ಧಾ ಭಕ್ತಿಯಿಂದ ಹನುಮ ಜಯಂತಿ ಆಚರಿಸಲಾಯಿತು.
ಚಿಂತಾಮಣಿ
Chintamani : ಹನುಮ ಜಯಂತಿ ಪ್ರಯುಕ್ತ ಪುರಾಣ ಪ್ರಸಿದ್ಧ ಆಲಂಬಗಿರಿ ಆಂಜನೇಯಸ್ವಾಮಿ ದೇಗುಲದ ಆಂಜನೇಯ ಸ್ವಾಮಿಗೆ ವೀಳೆದೆಲೆ ಹಾಗೂ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.
ನಗರದ ಹೃದಯ ಭಾಗದಲ್ಲಿರುವ ವರದಾದ್ರಿ ಬೆಟ್ಟದ ಮೇಲಿನ ಆಂಜನೇಯಸ್ವಾಮಿ ದೇವಾಲಯ, ಕನಂಪಲ್ಲಿ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಚೇಳೂರು
Chelur : ಪಟ್ಟಣದ ರಥ ಬೀದಿಯಲ್ಲಿನ ಇತಿಹಾಸ ಪ್ರಸಿದ್ಧ ಆಂಜನೇಯಸ್ವಾಮಿಗೆ ವಿಶೇಷ ವಿಳದೆಲೆ ಅಲಂಕಾರ ಮಾಡಲಾಯಿತು.
ಗೌರಿಬಿದನೂರು
Gauribidanur : ಗೌರಿಬಿದನೂರು ನಗರದ ನದಿ ದಡದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ರಥೋತ್ಸವ ನಡೆಯಿತು.
ಬಾಗೇಪಲ್ಲಿ
Bagepalli : ಬಾಗೇಪಲ್ಲಿ ಪಟ್ಟಣದ ಬಯಲಾಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.