Chintamani : ಚಿಂತಾಮಣಿ ನಗರದಲ್ಲಿ ಸೋಮವಾರ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಕನ್ನಡ ಕಾರ್ಯಕ್ರಮ ನಡೆಸಲು ಕನ್ನಡ ಭವನ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಿ, ಕನ್ನಡ ಭವನ (Kannada Bhavana) ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ (Protest) ಮೆರವಣಿಗೆ ನಡೆಸಿ ನಂತರ ನಗರಸಭೆಗೆ ಮುತ್ತಿಗೆ ಹಾಕಿ ನಗರಸಭೆ ಪೌರಾಯುಕ್ತರು ಹಾಗೂ ಜನಪ್ರತಿನಿಧಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಹೋರಾಟಗಾರ ಕುಂಟಿಗಡ್ಡೆ ಲಕ್ಷ್ಮಣ್ “ಗಡಿನಾಡಿನಲ್ಲಿ ಕನ್ನಡ ನಾಡು, ನುಡಿ, ನೆಲ,ಜಲ, ಭಾಷೆಯ ಉಳಿವಿಗಾಗಿ ಕನ್ನಡ ಪರ ಸಂಘಟನೆಗಳು ಶ್ರಮಿಸುತ್ತಿದ್ದು ಕನ್ನಡ ಪರ ಚಟುವಟಿಕೆ, ಸಾಂಸ್ಕೃತಿಕ ಕಾರ್ಯಕ್ರಮ, ಹೋರಾಟಗಳ ಬಗ್ಗೆ ಚರ್ಚಿಸಿ ಭಾಷೆಯ ಉಳಿವಿಗಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸಭೆ ಸಮಾವೇಶ ನಡೆಸಬೇಕಾಗುತ್ತದೆ. ಕಾರ್ಯಕ್ರಮಗಳನ್ನು ನಡೆಸಲು ನಗರದಲ್ಲಿ ಸ್ವಂತ ಸ್ಥಳಾವಕಾಶವಿಲ್ಲ. ಕನ್ನಡ ಭವನದ ನಿರ್ಮಾಣಕ್ಕಾಗಿ ಒತ್ತಾಯಿಸಿ ಹಲವಾರು ವರ್ಷಗಳಿಂದ ಕನ್ನಡ ಪರ ಸಂಘಟನೆಗಳು ಹೋರಾಟಗಳನ್ನು ಮಾಡಿ ನಗರಸಭೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದ ಸಂಸ್ಕೃತಿ ಪರಂಪರೆ ಎತ್ತಿ ಹಿಡಿಯಲು ಆಂಧ್ರದ ಗಡಿಭಾಗಕ್ಕೆ ಹೊಂದಿಕೊಂಡಿರುವ ನಗರದಲ್ಲಿ ಕನ್ನಡ ಭವನದ ಅವಶ್ಯಕತೆ ಇದೆ” ಎಂದು ತಿಳಿಸಿದರು.
ತಾಲ್ಲೂಕಿನ ವಿವಿಧ ಕನ್ನಡ ಪರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿ ಕನ್ನಡ ಭವನದ ನಿರ್ಮಾಣಕ್ಕೆ ನಿವೇಶನ ಮಂಜೂರು ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಕನ್ನಡ ಪರ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ನಗರಸಭೆ ಪೌರಾಯುಕ್ತ ರಾಘವೇಂದ್ರ ಗುರು ಅವರಿಗೆ ತಮ್ಮ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು.