Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಬ್ಯಾಂಕು (Bank) ಗಳ ಸಮಿತಿ ಮತ್ತು ರಾಜ್ಯ ಮಟ್ಟದ ಬ್ಯಾಂಕರ್ ಸಮಿತಿ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾಲ (Loan) ಸಂಪರ್ಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಕೆನರಾ ಬ್ಯಾಂಕ್ (Canara Bank) ಉಪ-ಮಹಾಪ್ರಬಂಧಕ ಪಾಶ್ವನಾಥ್ ” ಬ್ಯಾಂಕುಗಳು ತಂತ್ರಜ್ಞಾನ ಬಳಕೆಯಲ್ಲಿ ಮುಂದಿದ್ದು ಬ್ಯಾಂಕುಗಳು ಮತ್ತು ಸರ್ಕಾರವು ಪರಸ್ಪರ ಸಮನ್ವಯ ಸಾಧಿಸಿ ರೈತರ, ಕಾರ್ಮಿಕರ, ಉದ್ಯಮಿಗಳ ಹಾಗೂ ಗ್ರಾಹಕರ ಪರವಾಗಿ ಕಾರ್ಯನಿರ್ವಹಿಸಿದಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನು ಮತ್ತು ಕಾರ್ಯಕ್ರಮಗಳನ್ನು ಪಾರದರ್ಶಕವಾಗಿ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಬ್ಯಾಂಕ್‌ಗಳಿಂದ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದೆ” ಎಂದು ತಿಳಿಸಿದರು.
ತಂತ್ರಜ್ಞಾನ ಅಳವಡಿಕೆಯಲ್ಲಿ ಬ್ಯಾಂಕಿಂಗ್ ವಲಯ ಸಾಕಷ್ಟು ಪ್ರಗತಿ ಸಾಧಿಸಿ ದೇಶದ ಆರ್ಥಿಕ ಪ್ರಗತಿಗೆ ಮಹೋನ್ನತ ಕೊಡುಗೆ ನೀಡಿದೆ. ತಂತ್ರಜ್ಞಾನ ಹೆಚ್ಚಿದಂತೆ Cyber Crime ಪ್ರಕರಣಗಳು ಹೆಚ್ಚಾಗುತ್ತಿದ್ದು ವಿದ್ಯಾವಂತರು ಹೆಚ್ಚು ಈ ಪ್ರಕರಣಕ್ಕೆ ಬಲಿ ಆಗುತ್ತಿದ್ದಾರೆ. ಸೈಬರ್ ಕಳ್ಳರ ಬಗ್ಗೆ ಜಾಗೃತಿ ವಹಿಸಿ ವೈಯಕ್ತಿಕ ಮಾಹಿತಿಯನ್ನು ನೀಡದೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ (G K Mithun Kumar) ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್, ನಗರಸಭೆ ಅಧ್ಯಕ್ಷ ಡಿ.ಎಸ್. ಆನಂದರೆಡ್ಡಿ ಬಾಬು, ಕೆನರಾ ಬ್ಯಾಂಕಿನ ಕ್ಷೇತ್ರೀಯ ಕಾರ್ಯಾಲಯ ಸಹಾಯಕ ಮಹಾ ಪ್ರಬಂಧಕ ಎಚ್.ವೈ.ಸಂಜಯ್ ಕುಮಾರ್, ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಎಚ್.ಎಸ್.ಆನಂದ್ ಮತಿತ್ತರರು ಉಪಸ್ಥಿತರಿದ್ದರು.