Chikkaballapur : ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ (Tuberculosis) ಕೇಂದ್ರದ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ‘ಕ್ಷಯ ರೋಗ ವೇದಿಕೆ’ ಕಾರ್ಯಕ್ರಮದಲ್ಲಿ ಕ್ಷಯ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಭಿತ್ತಿಪತ್ರಗಳನ್ನು ಜಿಲ್ಲಾಧಿಕಾರಿ ಆರ್.ಲತಾ (Deputy Commissioner R. Latha) ಬಿಡುಗಡೆಗೊಳಿಸಿದರು.
ಬಡತನ ರೇಖೆಗಿಂತ ಕೆಳಗಿರುವ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದ ಬಳಲುತ್ತಿರುವ ಜಿಲ್ಲೆಯ ಮೂವರು ಕ್ಷಯರೋಗಿಗಳು ಸಂಪೂರ್ಣವಾಗಿ ಗುಣಮುಖರಾಗುವರೆಗೂ ಅವರ ವೈದ್ಯಕೀಯ ಸೌಲಭ್ಯದ ವೆಚ್ಚ, ಪೌಷ್ಟಿಕ ಆಹಾರ ಪೂರೈಕೆ ಸೇರಿದಂತೆ ಇತರ ಅಗತ್ಯ ವೆಚ್ಚಗಳ ಜವಾಬ್ದಾರಿಯ ಹೊಣೆಯನ್ನು ವೈಯಕ್ತಿಕವಾಗಿ ವಹಿಸಿಕೊಂಡು ಜಿಲ್ಲಾಧಿಕಾರಿ ಆರ್.ಲತಾ ಅವರು ದತ್ತು ಪಡೆದರು.
ಸುದ್ಧಿಗಾರರೊಂದಿಗೆ ಮಾತಾನಾಡಿದ ಜಿಲ್ಲಾಧಿಕಾರಿ ಆರ್.ಲತಾ ” ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸುವ ಉದ್ದೇಶದಿಂದ ಕ್ಷಯ ವೇದಿಕೆಯು 2025ರೊಳಗೆ ಜಿಲ್ಲೆಯ 14 ಗ್ರಾಮ ಪಂಚಾಯಿತಿಗಳಲ್ಲಿ ಕ್ಷಯಮುಕ್ತವನ್ನಾಗಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಮಂಚನಬಲೆ, ಅಗಲಗುರ್ಕಿ ಗ್ರಾಮ ಪಂಚಾಯಿತಿ, ಚಿಂತಾಮಣಿ ತಾಲ್ಲೂಕಿನ ಕೋನಂಪಲ್ಲಿ, ಕಾಗತಿ ಗ್ರಾಮ ಪಂಚಾಯಿತಿ, ಗೌರಿಬಿದನೂರು ತಾಲ್ಲೂಕಿನ ಕಾದಲವೇಣಿ ಹಾಗೂ ಹುಡಗೂರು ಗ್ರಾಮ ಪಂಚಾಯಿತಿ, ಬಾಗೇಪಲ್ಲಿ ತಾಲ್ಲೂಕಿನ ಪರಗೋಡು ಹಾಗೂ ದೇವರ ಗುಡಿಪಲ್ಲಿ ಪಂಚಾಯಿತಿ, ಶಿಡ್ಲಘಟ್ಟ ತಾಲ್ಲೂಕಿನ ದೊಡ್ಡತೇಕಹಳ್ಳಿ ಹಾಗೂ ಸಾದಲಿ ಪಂಚಾಯಿತಿ, ಗುಡಿಬಂಡೆ ತಾಲ್ಲೂಕಿನ ಬೀಚಗಾನಹಳ್ಳಿ ಹಾಗೂ ತಿರುಮಣಿ ಪಂಚಾಯಿತಿ, ಮಂಚೇನಹಳ್ಳಿ ತಾಲ್ಲೂಕಿನ ಮಂಚೇನಹಳ್ಳಿ ಹಾಗೂ ತಿರುಮಣಿ ಪಂಚಾಯಿತಿಗಳನ್ನು ಆಯ್ಕೆ ಮಾಡಲಾಗಿದೆ. ಸೂಕ್ತ ಚಿಕಿತ್ಸೆ ಪಡೆಯಲು ಕ್ಷಯ ರೋಗಿಗಳು ಸರ್ಕಾರದ ‘ನಿಕ್ಷಯ’ ವೆಬ್ ನಲ್ಲಿ ನೋಂದಾಯಿಸಿಕೊಳ್ಳಬೇಕು. ಈ ತಂತ್ರಾಂಶದಲ್ಲಿ ರೋಗಿಯ ಚಿಕಿತ್ಸೆ, ಚಿಕಿತ್ಸಾ ನಂತರದ ಪರೀಕ್ಷೆಗಳು ಇತ್ಯಾದಿ ವಿವರಗಳನ್ನು ದಾಖಲಿಸಲಾಗುತ್ತದೆ. ರೋಗಿಯು ಭಾರತದ ಯಾವುದೇ ಭಾಗದಲ್ಲಿ ಸ್ಥಳಾಂತರಗೊಂಡರೂ ನಿಕ್ಷಯ ನೋಂದಣಿ ಸಂಖ್ಯೆಯ ಮೂಲಕ ಚಿಕಿತ್ಸೆ ಮುಂದುವರಿಸಬಹುದು. ನಿಕ್ಷಯ ಪೋಷಣೆ ಯೋಜನೆಯಡಿ ನೋಂದಾಯಿತ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕ್ಷಯ ರೋಗಿಗೆ ಚಿಕಿತ್ಸೆ ಪೂರ್ಣವಾಗುವವರೆಗೂ ಪ್ರತಿ ತಿಂಗಳು ₹ 500 ರೋಗಿಯ ಬ್ಯಾಂಕ್ ಖಾತೆಗೆ ಜಮೆ ಆಗುತ್ತದೆ” ಎಂದು ತಿಳಿಸಿದರು.
ಯಲ್ಲಾ ರಮೇಶ್ ಬಾಬು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.