Chikkaballapur : ವಿಶ್ವ ಪ್ರವಾಸೋದ್ಯಮ ದಿನಾಚರಣೆ ( World Tourism Day ) ಅಂಗವಾಗಿ ಸೋಮವಾರ ತಾಲ್ಲೂಕಿನ ಭೋಗನಂದೀಶ್ವರ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಜಿಲ್ಲೆಯ ಪ್ರವಾಸಿ ತಾಣಗಳನ್ನು ಬಿಂಬಿಸುವ ಚಿತ್ರ ಬಿಡಿಸುವ ಶಿಬಿರವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಆರ್.ಲತಾ ಅವರು ಮಾತನಾಡಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ದೃಷ್ಟಿಯಿಂದ ವಿಶ್ವ ವಿಖ್ಯಾತ ನಂದಿ ಬೆಟ್ಟ, ರಂಗಸ್ಥಳ, ಶ್ರೀನಿವಾಸ ಸಾಗರ ಹಾಗೂ ಇನ್ನಿತರ ಪ್ರವಾಸಿ ತಾಣಗಳನ್ನು ಒಳಗೊಂಡಂತೆ ಜಿಲ್ಲೆಗೆ ಪ್ರವಾಸಕ್ಕೆ ಬರುವ ಜನರನ್ನು ದಿನಪೂರ್ತಿ ಜಿಲ್ಲೆಯ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಅನುಕೂಲವಾಗವಂತೆ ಟೂರಿಸಂ ಸರ್ಕ್ಯೂಟ್ ನಿರ್ಮಿಸಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ನಂದಿ ಗಿರಿಧಾಮ ಸೇರಿದಂತೆ ಸಾಕಷ್ಟು ಪ್ರವಾಸೀ ತಾಣಗಳಿದ್ದು ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಹೆಚ್ಚಿನ ಅವಕಾಶಗಳಿವೆ ಎಂದರು. ಇಡೀ ಒಂದು ದಿನ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಂದರ್ಶಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುವುದು.
ಕಂದವಾರ ಕೆರೆ ಬಳಿ ಕೆ.ಆರ್.ಎಸ್.ಬೃಂದಾವನ ಮಾದರಿಯಲ್ಲಿ ₹ 8.10 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಿಸಲಾಗುವುದು. ಇದರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಜಿಲ್ಲಾ ಉಸ್ತುವಾರಿ ಸಚಿವರು ಈಕೋ ಥೀಮ್ ಪಾರ್ಕ್ ಗೆ ಶಂಕುಸ್ಥಾಪನೆ ನೆರವೇರಿಸುವರು ಎಂದು ಅವರು ತಿಳಿಸಿದರು.
ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳ ಶ್ರೀನಿವಾಸ ಸಾಗರದ ಬಳಿ ಉದ್ಯಾನವನ ನಿರ್ಮಿಸಲಾಗುವುದು. ಚಿಕ್ಕಬಳ್ಳಾಪುರ ನಗರಕ್ಕೆ ಹೊಂದಿಕೊಂಡಿರುವ ರಂಗಸ್ಥಳದಲ್ಲಿ 21 ಎಕರೆ ಜಾಗದಲ್ಲಿ ಪ್ರವಾಸಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗಿದ್ದು, ಸದ್ಯದಲ್ಲೇ ಅನುಮೋದನೆ ದೊರೆಯಲಿದೆ ಎಂದರು.