Chikkaballapura : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನೂತನ ಸರ್ಕಾರಿ ಗೋಶಾಲೆ (Goshala) ಆರಂಭಿಸುವ ಕುರಿತ ನಡೆದ ಸಭೆಯಲ್ಲಿ ಸರ್ಕಾರಿ ಗೋಶಾಲೆ ಕಾಮಗಾರಿಗೆ ಶಂಕುಸ್ಥಾಪನೆ ನಡೆದಿರುವ ಶಿಡ್ಲಘಟ್ಟ ತಾಲ್ಲೂಕಿನ ನಾಗಿರೆಡ್ಡಿಹಳ್ಳಿ ಗ್ರಾಮದ ಬಳಿ ಕನಿಷ್ಠ 100 ಗೋವುಗಳ ಪಾಲನೆ, ಪೋಷಣೆ ಹಾಗೂ ಸಂರಕ್ಷಣೆಗೆ ಸೌಲಭ್ಯ ಕಲ್ಪಿಸಿ ಗೋಶಾಲೆ ಆರಂಭಿಸಾಲು ಪಶುಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚಿಸಿದರು.
ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020ರ ಅನ್ವಯ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 1 ಗೋಶಾಲೆ ಸ್ಥಾಪಿಸಬೇಕು. ಶಿಡ್ಲಘಟ್ಟ ತಾಲ್ಲೂಕಿನ ನಾಗಿರೆಡ್ಡಿಹಳ್ಳಿ ಗ್ರಾಮದ ಸರ್ವೆ ನಂ 41ರಲ್ಲಿ 10 ಎಕರೆಯನ್ನು ಗೋಶಾಲೆಗೆ ಜಿಲ್ಲಾಡಳಿತ ಮಂಜೂರು ಮಾಡಿದೆ. ನಿಗದಿಯಾಗಿರುವ ಜಮೀನಿನಲ್ಲಿ ಮಾದರಿ ಗೋಶಾಲೆ ನಿರ್ಮಾಣ ಮಾಡಲು ರೂಪುರೇಷೆಗಳನ್ನು ಸಿದ್ಧಪಡಿಸಿಕೊಳ್ಳಬೇಕು. ತುರ್ತಾಗಿ ನೂರು ಗೋವುಗಳ ಪಾಲನೆ, ಪೋಷಣೆ ಹಾಗೂ ಸಂರಕ್ಷಣೆಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಅವರು ಹೇಳಿದರು.
ಗೋಶಾಲೆ ಸ್ಥಾಪಿಸಲು ₹ 50 ಲಕ್ಷ ಅನುದಾನ ನಿಗದಿಯಾಗಿದೆ. ಸರ್ಕಾರಿ ಗೋಶಾಲೆ ಪೂರ್ಣ ಕಾಲಿಕವಾಗಿ ಅಭಿವೃದ್ಧಿಗೊಂಡು ಚಾಲನೆಗೊಳ್ಳುವವರೆಗೆ ತಾತ್ಕಾಲಿಕ ಗೋಶಾಲೆ ಆರಂಭಿಸಬೇಕು. ಶೆಡ್ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಬೇಲಿ, ಮೇವು ಪೂರೈಕೆ, ವಿದ್ಯುತ್ ಸಂಪರ್ಕ, ಸಂರಕ್ಷಣೆ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಲು ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲೆಯಲ್ಲಿರುವ ರೋಗಗ್ರಸ್ತ, ಅನುತ್ಪಾದಕ, ಪ್ರಕೃತಿ ವಿಕೋಪಗಳಿಂದ ಅಂಗವಿಕಲತೆಗೆ ಒಳಗಾದ, ಬಿಡಾಡಿ ಜಾನುವಾರುಗಳಿಗೆ ಗೋಶಾಲೆಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು. ಪೋಷಣೆ ಮಾಡಲು ಸಾಧ್ಯವಿಲ್ಲ ಎನ್ನುವ ರಾಸುಗಳನ್ನು ಮಾಲೀಕರು ಇಲ್ಲಿಗೆ ತಂದು ಬಿಡಬಹುದು. ಈ ಬಗ್ಗೆ ಪಶು ಸಂಗೋಪನೆ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಜನಾರ್ದನ್, ಲಯನ್ಸ್ ಕ್ಲಬ್ ಕಾರ್ಯಕ್ರಮ ಸಂಯೋಜಕ ಪಿ.ಎಂ.ರವಿನಾಯ್ಡು, ಜಿಲ್ಲಾ ಪ್ರಾಣಿ ದಯಾಸಂಘದ ಸದಸ್ಯ ಪೃಥ್ವಿರಾಜ್, ರಾಧಾ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.