Chikkaballapur : ಜನವರಿ 7 ರಿಂದ 14 ರವರೆಗೆ ನಡೆಯುವ ಚಿಕ್ಕಬಳ್ಳಾಪುರ ಉತ್ಸವದ (Chikkaballapura Utsava) (CKB Utsava) ಅಂಗವಾಗಿ ಜಿಲ್ಲೆಯಾದ್ಯಂತ ‘ಕ್ಲೀನ್ ಚಿಕ್ಕಬಳ್ಳಾಪುರ’ (Clean Chikkaballapura) ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಚಿಕ್ಕಬಳ್ಳಾಪುರ ನಗರದ ಬಲಮುರಿ ಸರ್ಕಲ್ ನಲ್ಲಿ ಗುರುವಾರ ಅಭಿಯಾನಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ (K Sudhakar) ಚಾಲನೆ ನೀಡಿ “ಪೌರ ಕಾರ್ಮಿಕರ ಜೊತೆ ಪ್ರತಿಯೊಬ್ಬ ನಾಗರಿಕನೂ ಕೈ ಜೋಡಿಸಿದಾಗ ಸ್ವಚ್ಛ ನಗರ, ಸ್ವಚ್ಛ ಜಿಲ್ಲೆ ಮತ್ತು ಸ್ವಚ್ಛ ರಾಜ್ಯವಾಗಲಿದೆ . ಕಸವನ್ನು ಹಸಿ ಕಸ ಮತ್ತು ಒಣ ಕಸವಾಗಿ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು. ಪ್ಲಾಸ್ಟಿಕ್ ಎಂಬ ಮಹಾಮಾರಿಯನ್ನು ದೂರ ಮಾಡಿ, ರಾಜ್ಯವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಎಲ್ಲ ಅಂಗಡಿಗಳು, ಹೋಟೆಲ್ ಗಳು ಮತ್ತು ಸಾರ್ವಜನಿಕರು ಸಹಕರಿಸಬೇಕು” ಎಂದು ತಿಳಿಸಿದರು.
ಪ್ಲಾಸ್ಟಿಕ್ ಬಳಕೆ ನಿಷೇಧ ಕುರಿತು ನಗರದ ಬಲಮುರಿ ಸರ್ಕಲ್ ನಿಂದ ಖಾಸಗಿ ಬಸ್ ನಿಲ್ದಾಣದವರೆಗಿನ ಅಂಗಡಿಗಳಿಗೆ ಕರ ಪತ್ರಗಳನ್ನು ಹಂಚಿದ ಸಚಿವರು, ಗೋಡೆಯ ಮೇಲೆ ತಾವೇ ಖುದ್ದು ಕರಪತ್ರಗಳನ್ನು ಅಂಟಿಸುವ ಮೂಲಕ ಸ್ವಚ್ಛತೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಜಿ.ಸಂತೋಷ್ ಕುಮಾರ್, ನಗರಸಭೆ ಅಧ್ಯಕ್ಷ ಆನಂದರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೃಷ್ಣಮೂರ್ತಿ, ತಹಶೀಲ್ದಾರ್ ಗಣಪತಿಶಾಸ್ತ್ರಿ, ಪೌರಾಯುಕ್ತ ಉಮಾಶಂಕರ್ ಮತ್ತಿತರರು ಉಪಸ್ಥಿತರಿದ್ದರು.