Chintamani : ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಚಿಂತಾಮಣಿ ನಗರದ ಅಂಬೇಡ್ಕರ್ ಭವನದಲ್ಲಿ (Ambedkar Bhavan) ಭೀಮೋತ್ಸವ (Bheemotsava 2022) ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೌರಕಾರ್ಮಿಕರು, ಕಟ್ಟಡ ಕಾರ್ಮಿಕರು, ಹಮಾಲಿ ಕೂಲಿ ಕಾರ್ಮಿಕರು ಹಾಗೂ ಅಲ್ಪಸಂಖ್ಯಾತ ಮಹಿಳೆಯರಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ, ನಿರ್ದೇಶಕ ಡಾ.ಪಲ್ಲಕ್ಕಿ ರಾಧಾಕೃಷ್ಣ “ಜೀವನದ ಅನುಭವಗಳು ಅಂಬೇಡ್ಕರ್‌ಗೆ ದಾರಿ ದೀಪವಾದವು. ಅದೇ ಮಾರ್ಗವನ್ನು ಜನರು ಅನುಕರಣೆ ಮಾಡಬೇಕು ಆದರೆ ದೇಶದ ಜನರು ಇನ್ನೂ ಅಂಬೇಡ್ಕರ್ ಹಾದಿಯಲ್ಲಿ ನಡೆಯದಿರುವುದು ವಿಷಾದನೀಯ. ದೇಶಕ್ಕೆ ಸಂವಿಧಾನ ಧರ್ಮವಾಗಬೇಕು, ಸಂವಿಧಾನವನ್ನು ಮರೆತರೆ ಅಡಿಪಾಯವಿಲ್ಲದ ಕಟ್ಟಡದಂತೆ ದೇಶ ಅಭಿವೃದ್ಧಿಯಲ್ಲಿ ಹಿಮ್ಮುಖ ಚಲಿಸಬೇಕಾಗುತ್ತದೆ. ಅಂಬೇಡ್ಕರ್ ತನ್ನನ್ನು ತಾನು ಸುಟ್ಟುಕೊಂಡು ದೇಶದ ಜನರಿಗೆ ಬೆಳಕು ನೀಡಿದ್ದಾರೆ. ಆದರೆ ನಾವು ಬೆಳಕಿನಲ್ಲಿ ನಡೆಯದೆ ಜಾತಿ, ಧರ್ಮದ ಹೆಸರಿನಲ್ಲಿ ಮತ್ತೆ ಕತ್ತಲಿನ ಕೂಪಕ್ಕೆ ಬೀಳುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಚಿಂತಕ ಕೋಟಗಾನಹಳ್ಳಿ ರಾಮಯ್ಯ, ಭಾರತೀಯ ಅಂಬೇಡ್ಕರ್ ಸೇನೆಯ ಆಂಧ್ರಪ್ರದೇಶದ ಡಾ. ದಯಾಕರ್ ನಾಗಲೂರು ಮುಂತಾದವರು ಪಾಲ್ಗೊಂಡಿದ್ದರು.