Chintamani : ಚಿಂತಾಮಣಿ ನಗರ ಠಾಣೆ ಪೊಲೀಸರು ಬೈಕ್ ಕಳ್ಳನನ್ನು ಬಂಧಿಸಿ (Bike Thief Arrest), ಸುಮಾರು ₹ 2.05 ಲಕ್ಷ ಬೆಲೆ ಬಾಳುವ 4 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.
ಪೋಲೀಸರ ತಂಡ ಶನಿವಾರ ಮಧ್ಯಾಹ್ನ ನಗರದ ಬಾಗೇಪಲ್ಲಿ ವೃತ್ತದಲ್ಲಿ ಗಸ್ತು ಮಾಡುತ್ತಿದ್ದಾಗ ಶಿಡ್ಲಘಟ್ಟ ಕಡೆಯಿಂದ ದ್ವಿಚಕ್ರವಾಹನದಲ್ಲಿ ಚಿಂತಾಮಣಿಗೆ ಬರುತ್ತಿದ್ದ ಒಬ್ಬ ವ್ಯಕ್ತಿ ಪೊಲೀಸರನ್ನು ಕಂಡ ಕೂಡಲೇ ಗಾಬರಿಗೊಂಡು ಹಿಂದಕ್ಕೆ ವಾಪಸ್ ಹೋದ. ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇತರೆ ಸ್ಥಳಗಳಲ್ಲಿ 3 ದ್ವಿಚಕ್ರವಾಹನಗಳನ್ನು ಕಳ್ಳತನ ಮಾಡಿದ್ದು ತನ್ನ ಮೆಕಾನಿಕ್ ಅಂಗಡಿ ಬಳಿ ನಿಲ್ಲಿಸಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಹೈದರಾಲಿ ಮೊಹಲ್ಲಾದ ಮುಸಾ ವೀರ್ ಪಾಷಾ ಬಂಧಿತ ಆರೋಪಿಯಾಗಿದ್ದು ಈತನನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದ್ವಿಚಕ್ರವಾಹನಗಳ ಕಳ್ಳತನದ ಪ್ರಕರಣಗಳ ಪತ್ತೆಗಾಗಿ ಡಿವೈಎಸ್‌ಪಿ ಮುರಳೀಧರ್ ಮಾರ್ಗದರ್ಶನದಲ್ಲಿ ನಗರ ಠಾಣೆ ಇನ್‌ಸ್ಪೆಕ್ಟರ್ ವಿಜಯ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಸಬ್ ಇನ್ ಸ್ಪೆಕ್ಟರ್‌ಗಳಾದ ವಿ.ರಮೇಶ್, ಪ್ರಕಾಶ್ ಹಾಗೂ ಸಿಬ್ಬಂದಿ ಜಗದೀಶ್, ಮಂಜುನಾಥ್, ಶ್ರೀನಿವಾಸಮೂರ್ತಿ, ಲೋಕೇಶ್, ಸಂಪತ್, ಮಂಜುನಾಥ್ ತಂಡದಲ್ಲಿದ್ದರು.