Chintamani : ಚಿಂತಾಮಣಿ ತಾಲ್ಲೂಕಿನ ಪಣಸಚೌಡನಹಳ್ಳಿಯಲ್ಲಿ (Panasachowdanahalli) ಸೋಮವಾರ ವೆಂಕಟರಮಣಸ್ವಾಮಿ ರಥೋತ್ಸವ (Venkataramana Swamy Rathotsava) ಅಪಾರ ಸಂಖ್ಯೆ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿಸಲಾಯಿತು.
ರಥೋತ್ಸವದ ನಿಮಿತ್ತ ದೇವಾಲಯವನ್ನು ವಿವಿಧ ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ವೆಂಕಟರಮಣಸ್ವಾಮಿ ದೇವರಿಗೆ ಅಭಿಷೇಕ, ಅಲಂಕಾರ, ವಿಶೇಷ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಗ್ರಾಮದ ದ್ವಾರಬಾಗಿಲು ಹಾಗೂ ಪ್ರತಿ ಬೀದಿಗೆ ಬಣ್ಣದ ವಿದ್ಯುತ್ ದೀಪ ಮತ್ತು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು.
ವೀರಗಾಸೆ ಕುಣಿತ, ಕೀಲುಕುದುರೆ ಹಾಗೂ ಗೊಂಬೆ ಕುಣಿತ, ತಮಟೆವಾದ್ಯ ಸಾಥ್ ನೀಡಿದವು. ರಾತ್ರಿ ರಸಮಂಜರಿ ಮತ್ತು ಕೋಲಾಟಕ್ಕೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಸೇರಿದ್ದರು.