Chintamani : ಚಿಂತಾಮಣಿ ನಗರದ ಬೆಂಗಳೂರು ವೃತ್ತದಲ್ಲಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ಗೆ ಬುಧವಾರ ನಸುಕಿನಜಾವ ಬೆಂಕಿ (bus fire) ಬಿದ್ದು ಸಂಪೂರ್ಣವಾಗಿ ಸುಟ್ಟುಹೋಗಿದೆ. ಪಕ್ಕದಲ್ಲಿದ್ದ 10-12 ದ್ವಿಚಕ್ರವಾಹನಗಳು ಸಹ ಬೆಂಕಿಗೆ ಆಹುತಿಯಾಗಿವೆ.
ಹೊಸಕೋಟೆ ಕೈಗಾರಿಕಾ ಪ್ರದೇಶಕ್ಕೆ ನೌಕರರನ್ನು ಕರೆದುಕೊಂಡು ಹೋಗುವ ಅನ್ನಪೂರ್ಣೇಶ್ವರಿ ಬಸ್ ಅನ್ನು ಚಾಲಕ ರಾತ್ರಿ ಖಾಸಗಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ರಾತ್ರಿ ಗಸ್ತು ನಡೆಸುತ್ತಿದ್ದ ಪೊಲೀಸರಿಗೆ ಬೆಂಕಿ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ, ಕೂಡಲೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದಾಗ ಬಸ್ ನಿಲ್ದಾಣದ ಹಿಂಭಾಗದಲ್ಲಿ ಇರುವ ದೂರವಾಣಿ ಇಲಾಖೆಗೆ ಸೇರಿದ ಜಾಗದ ಗೋಡೆ ಬಸ್ ಡಿಕ್ಕಿಯಾಗಿ ಉರುಳಿರುವುದು ಕಂಡುಬಂದಿದೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಸುಮಾರು ಒಂದು ಗಂಟೆ ಅವಧಿಯಲ್ಲಿ ಬೆಂಕಿ ನಿಯಂತ್ರಣಕ್ಕೆ ತರಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿ ಪೆಟ್ರೋಲ್ ಬಂಕ್‌ಗೆ ಬೆಂಕಿ ಹರಡುವುದನ್ನು ತಡೆದಿದ್ದಾರೆ. ಘಟನೆಗೆ ಕಾರಣ ತಿಳಿದುಬರುವಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.