Chintamani : ಅಂಬೇಡ್ಕರ್ ಜಯಂತಿ (Ambedkar Jayanthi) ಆಚರಣೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ (preparatory meeting) ಬುಧವಾರ ದಲಿತ ಸಂಘಟನೆಗಳ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು, ಇದರಿಂದ ಒಂದು ಗುಂಪು ಸಭೆಯನ್ನು ಬಹಿಷ್ಕರಿಸಿ ಹೊರನಡೆಯಿತು.
ಚಿಂತಾಮಣಿ ನಗರದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಕೊಳಕು ಬಟ್ಟೆ ಹೊದಿಸಿರುವುದನ್ನು ತೆರವುಗೊಳಿಸಿ ಅನಾವರಣಗೊಳಿಸಿದ ನಂತರ ಜಯಂತಿಯನ್ನು ಆಚರಿಸಬೇಕು ಎಂದು ಒತ್ತಾಯಿಸಿದ್ದಾಗ ಈ ವಿಷಯ ನ್ಯಾಯಾಲಯದಲ್ಲಿ ಪ್ರಲಂಬಿತವಾಗಿರುವುದರಿಂದ ಇದರ ಬಗ್ಗೆ ಸಭೆಯಲ್ಲಿ ಚರ್ಚಿಸುವುದು ಸರಿಯಲ್ಲ ಎಂದು ತಹಶೀಲ್ದಾರ್ ಸುದರ್ಶನ ಯಾದವ್ ಹೇಳಿದರು.
ಈ ಹಿನ್ನೆಲೆಯಲ್ಲಿ ದಲಿತಪರ ಸಂಘಟನೆಗಳ ಎರಡು ಗುಂಪುಗಳ ನಡುವೆ ಪರ ಮತ್ತು ವಿರೋಧ ಘೋಷಣೆ ಮೊಳಗಿದವು. ವಾಗ್ವಾದ ತೀವ್ರವಾಗಿ, ಕೊನೆಗೆ ಒಂದು ಗುಂಪು ಸಭೆಯಿಂದ ಹೊರನಡೆದು ಬಹಿಷ್ಕಾರ ಘೋಷಿಸಿತು.
ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯನ್ನು ಪ್ರತಿವರ್ಷದಂತೆ ಅದ್ದೂರಿಯಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ ನಾಯಕ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶಬಾಬು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಸ್.ಆನಂದ್, ಪೊಲೀಸ್ ಇನ್‌ಸ್ಪೆಕ್ಟರ್ ವಿಜಿ ಕುಮಾರ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.