Chintamani : ಮಸಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ, ಮಸಣ ಕಾರ್ಮಿಕರ ಸಂಘ ಹಾಗೂ ತಮಟೆ ಕಲಾವಿದರ ಸಂಘದ ಪದಾಧಿಕಾರಿಗಳ ನಿಯೋಗವು ಬುಧವಾರ (Funeral workers demands) ಚಿಂತಾಮಣಿ ಪೌರಾಯುಕ್ತ ಜಿ.ಎನ್.ಚಲಪತಿಗೆ ಮನವಿ ಸಲ್ಲಿಸಿತು.
ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚು ಮಸಣಗಳಲ್ಲಿ 2.5 ಲಕ್ಷ ದಲಿತ ಕುಟುಂಬಗಳ ಸದಸ್ಯರು ಶವ ಸಂಸ್ಕಾರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದು ಎಲ್ಲ ಸಮುದಾಯಗಳ ಮಸಣಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶತಮಾನಗಳಿಂದ ಅವರು ಜಾತಿ ತಾರತಮ್ಯ ಮತ್ತು ದೌರ್ಜನ್ಯದ ಭಾಗವಾಗಿ ಈ ಕೆಲಸ ಮಾಡುತ್ತಿದ್ದಾರೆ. ಶಿವನ ಸೇವೆ ಎಂದು ನಂಬಿಸಿ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಾ ಬರಲಾಗಿದೆ. ಅಲ್ಲಿ ದೊರೆಯುವ ಸಣ್ಣ ಮೊತ್ತವನ್ನು ಕುಟುಂಬಕ್ಕೆ ಉಪಯೋಗಿಸುವುದು ಪಾಪ ಕೃತ್ಯ ಎಂದು ನಂಬಿಸಿ ಕುಟುಂಬಕ್ಕೆ ಆದಾಯ ಸಿಗದಂತೆ ವಂಚಿಸಲಾಗುತ್ತಿದೆ. ಎಲ್ಲ ಮಸಣ ಕಾರ್ಮಿಕರಿಗೆ ಗುಣಿ ತೆಗೆಯಲು ಮತ್ತು ಮುಚ್ಚಲು ಬೇಕಾದ ಸೂಕ್ತ ಸಲಕರಣೆಗಳನ್ನು ಆಯಾ ನಗರಸಭೆ ಮತ್ತು ಗ್ರಾಮ ಪಂಚಾಯಿತಿ ನೀಡಬೇಕು. ಮಸಣ ಕಾರ್ಮಿಕರಿಗೆ ವಾಸ ಮಾಡಲು ನಿವೇಶನ ಮತ್ತು ಪಕ್ಕಾ ಮನೆಯನ್ನು ನಿರ್ಮಾಣಕ್ಕೆ ₹10 ಲಕ್ಷ ಅನುದಾನ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪೌರಾಯುಕ್ತ ಜಿ.ಎನ್.ಚಲಪತಿ ಮನವಿ ಸ್ವೀಕರಿಸಿ, ಕಾನೂನಿನಂತೆ ಸೌಲಭ್ಯಗಳನ್ನು ಒದಗಿಸುವುದಾಗಿ ಭರವಸೆ ನೀಡಿದರು.