Gauribidanur : ಗೌರಿಬಿದನೂರಿನ ಎನ್‌ಎಸ್‌ಎಲ್ ಶುಗರ್ಸ್ ಕಾರ್ಖಾನೆಯಲ್ಲಿ (NSL Sugars) ದಶಕಗಳ ಹಿಂದೆ ಕಾರ್ಯನಿರ್ವಹಿಸಿರುವ ಕಾರ್ಮಿಕರ ಬಾಕಿ ವೇತನದ ಅಸಲು ಮತ್ತು ಬಡ್ಡಿ ಪಾವತಿಸಿ ಎಂದು ಆಗ್ರಹಿಸಿ ಕಾರ್ಮಿಕರು ಮಂಗಳವಾರ ಕಾರ್ಖಾನೆಯ ಮುಂಭಾಗ ಪ್ರತಿಭಟನೆ (Workers Protest) ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕರ ಸಂಘದ ಅಧ್ಯಕ್ಷ ಮೋಹನ್ “ಕಳೆದ ಎರಡು ದಶಕಗಳ ಹಿಂದೆ ಈ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 567 ಕಾರ್ಮಿಕರಿಗೆ ಕಾರ್ಖಾನೆಯ ಆಡಳಿತ ಮಂಡಳಿ ₹70 ಕೋಟಿ ಪಾವತಿಸಬೇಕಾಗಿದೆ. ಆದರೆ ಕಾರ್ಖಾನೆ ಸ್ಥಗಿತಗೊಂಡಿರುವ ಕಾರಣ ಕಾರ್ಮಿಕರು ಸುಮ್ಮನಾಗಿದ್ದರು. ಇತ್ತೀಚೆಗೆ ಮೊದಲಿದ್ದ ಸಿರುಗುಪ್ಪ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯು ಎನ್‌ಎಸ್‌ಎಲ್ ಶುಗರ್ಸ್ ಸಂಸ್ಥೆಗೆ ಕಾರ್ಖಾನೆಯ ಆಸ್ತಿಯನ್ನು ಮಾರಾಟ ಮಾಡಿತ್ತು ಅವರು ಕಾರ್ಖಾನೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ ಕಾರ್ಮಿಕರ ಬಾಕಿ ವೇತನ ನೀಡದೆ ಏಕಾಏಕಿ ಕಾರ್ಖಾನೆಯಲ್ಲಿದ್ದ ಹಳೆ ಯಂತ್ರೋಪಕರಣ ಮತ್ತು ಲೋಹದ ವಸ್ತುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಸೂಕ್ತ ನ್ಯಾಯ ಒದಗಿಸದೆ ಈ ರೀತಿ ಮಾಡುವುದು ಅಪರಾಧ. ಆದ್ದರಿಂದ ನಮಗೆ ಸೂಕ್ತ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ” ಎಂದು ತಿಳಿಸಿದರು.
ಸ್ಥಳಕ್ಕೆ ಸಿಪಿಐ ಕೆ.ಪಿ.ಸತ್ಯನಾರಾಯಣ ಭೇಟಿ ನೀಡಿ ಕಾರ್ಮಿಕರ ಮತ್ತು ರೈತರ ಅಹವಾಲನ್ನು ಆಲಿಸಿ ಸಂಬಂಧಪಟ್ಟ ಸಂಸ್ಥೆಯ ವ್ಯವಸ್ಥಾಪಕರೊಂದಿಗೆ ಮಾತನಾಡಿದರು. ಗುರುವಾರ ಸಂಸ್ಥೆಯವರು ಸ್ಥಳೀಯ ಕಾರ್ಮಿಕರು ಮತ್ತು ರೈತರೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡುವುದಾಗಿ ತಿಳಿಸಿದರು. ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಿ.ವಿ.ಲೋಕೇಶ್ ಗೌಡ, ಕಾರ್ಮಿಕ ರಾಮಕೃಷ್ಣಪ್ಪ, ಗಂಗಾಧರ್, ಮುನಿಯಪ್ಪ, ಲೋಕೇಶ್, ರಾಜಣ್ಣ, ನವೀನ್, ಅನಿಲ್ ಕುಮಾರ್, ಗಂಗಮ್ಮ, ರತ್ನಮ್ಮ, ಮುನಿಯಕ್ಕ, ಅಶ್ವತ್ಥಪ್ಪ, ರಾಮಪ್ಪ, ಶ್ರೀನಿವಾಸ್, ಜಯಮ್ಮ, ರಾಜಣ್ಣ, ಬಾಬು, ಬಾಲಕೃಷ್ಣ ರೆಡ್ಡಿ, ಗೋಪಿ, ನಂದನ್ ಮತ್ತಿತರರು ಉಪಸ್ಥಿತರಿದ್ದರು.