Chintamani : ಚಿಂತಾಮಣಿ ತಾಲ್ಲೂಕಿನ ಕಾನಗಮಾಕಲಹಳ್ಳಿ ಗ್ರಾಮದ ಮಂಜುಳಾ ರಮೇಶ್ ಡಿಸೆಂಬರ್ 1 ರಂದು ಹೆಣ್ಣು ಮಗುವಿಗೆ (Child) ಜನ್ಮ ನೀಡಿದ್ದು, ಮಗುವಿಗೆ ಜ್ವರವಿದ್ದ ಕಾರಣ ಶನಿವಾರ ಬೆಳಿಗ್ಗೆ ವೈದ್ಯರ ಸೂಚನೆಯಂತೆ ಮಂಜುಳಾ ಎರಡು ಹನಿ ಔಷಧ ನೀಡಿದ್ದಾರೆ. ಬಳಿಕ ಮಗುವಿನ ಚಲನವಲನದಲ್ಲಿ ವ್ಯತ್ಯಾಸ ಕಂಡ ಬಂದಿದ್ದು ಕೂಡಲೇ ಸಾರ್ವಜನಿಕ ಆಸ್ಪತ್ರೆಯ ಮಕ್ಕಳ ತಜ್ಞರ ಬಳಿ ತೋರಿಸಿದ್ದಾರೆ. ಆಗ ಮಗು ಮೃತಪಟ್ಟಿದೆ (Death) ಎಂದು ಅಲ್ಲಿಯ ವೈದ್ಯರು ತಿಳಿಸಿದ್ದಾರೆ.
ಮಗುವಿನ ಸಾವಿಗೆ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಕಾರಣ. ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಪರೀಕ್ಷಿಸಲು ಆಸ್ಪತ್ರೆಯಲ್ಲಿ ಯಾವೊಬ್ಬ ವೈದ್ಯ ಹಾಗೂ ಶುಶ್ರೂಷಕಿ ಇರಲಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷ್ ಅವರು ಪ್ರತಿಭಟನಕಾರರ ಮನವಿ ಆಲಿಸಿ ಸೂಕ್ತ ಕ್ರಮದ ಭರವಸೆ ನೀಡಿದ್ದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಈ ಕುರಿತು ತನಿಖೆ ಮಾಡಿ ” ವೈದ್ಯರಿಂದ ಲೋಪವಾಗಿಲ್ಲ. ಉಸಿರುಗಟ್ಟಿ ಮಗು ಮೃತಪಟ್ಟಿದೆ ಎಂದು ಆಡಳಿತ ವೈದ್ಯಾಧಿಕಾರಿ ಹೇಳಿದ್ದಾರೆ. ವೈದ್ಯರು ಮತ್ತು ಶುಶ್ರೂಷಕಿಯರ ನಿರ್ಲಕ್ಷ್ಯವಿಲ್ಲ ” ಎಂದು ತಿಳಿಸಿದ್ದಾರೆ.