Chintamani : ಸಾರ್ವಜನಿಕ ಆರೋಗ್ಯ ಇಲಾಖೆ ವತಿಯಿಂದ ಮಂಗಳವಾರ ಚಿಂತಾಮಣಿ ನಗರದಲ್ಲಿ 75ನೇ ವರ್ಷದ ಸ್ವತಂತ್ರ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕು ಮಟ್ಟದ ಆರೋಗ್ಯ ಮೇಳ (Health Camp) ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಮೇಳದಲ್ಲಿ ಆರೋಗ್ಯ, ಪೌಷ್ಟಿಕ ಆಹಾರ, ಕೊರೊನಾ ಕುರಿತು ಅರಿವು ಮೂಡಿಸುವ 12 ಸ್ಟಾಲ್‌ಗಳನ್ನು ತೆರೆಯಲಾಗಿತ್ತು. ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಉಚಿತ ಆರೋಗ್ಯ ತಪಾಸಣೆಯಲ್ಲಿ ನೂರಾರು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಮೇಳವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಎಂ.ಕೃಷ್ಣಾರೆಡ್ಡಿ “ಆರ್ಥಿಕ ಮುಗ್ಗಟ್ಟಿನಿಂದ ಬಡವರು, ಹಿಂದುಳಿದ ವರ್ಗದವರು ಚಿಕಿತ್ಸೆಗೆ ಮುಂದಾಗದೆ ಅಂಗಡಿಗಳಲ್ಲಿ ದೊರೆಯುವ ಮಾತ್ರೆ, ಔಷಧಿಯನ್ನು ತೆಗೆದುಕೊಂಡು ಕಾಲ ದೂಡುತ್ತಾರೆ ಅಂತಹವರಿಗೆ ಆರೋಗ್ಯದ ಕುರಿತು ಜಾಗೃತಿ ಮೂಡಿಸಿ ಹಾಗೂ ಬಡವರಿಗೆ ಸೂಕ್ತ ಉಚಿತ ಚಿಕಿತ್ಸೆ ನೀಡಲು ಎಲ್ಲ ತಾಲ್ಲೂಕುಗಳಲ್ಲಿ ಬೃಹತ್ ಆರೋಗ್ಯ ಮೇಳಗಳನ್ನುಸರ್ಕಾರದಿಂದ ಆಯೋಜಿಸಲಾಗುತ್ತಿದ್ದೆ. ಆರೋಗ್ಯ ಇಲಾಖೆಯ ಕಾರ್ಯಕರ್ತರು ಆಯುಷ್ಮಾನ್ ಕಾರ್ಡ್ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಿ ಪ್ರತಿಯೊಂದು ಕುಟುಂಬವೂ ಕಾರ್ಡ್ ಪಡೆದುಕೊಳ್ಳುವಂತೆ ಕ್ರಮಕೈಗೊಳ್ಳಬೇಕು. ಕಾರ್ಡ್ ಹೊಂದಿದ್ದರೆ ಸರ್ಕಾರ ಅವರ ಚಿಕಿತ್ಸೆಗಾಗಿ ₹5 ಲಕ್ಷ ಖರ್ಚನ್ನು ಬರಿಸುತ್ತದೆ. ಕೊರೊನಾ ಇನ್ನೂ ಸಂಪೂರ್ಣವಾಗಿ ನಿರ್ನಾಮವಾಗಿಲ್ಲ. ಸಾರ್ವಜನಿಕರು ಎಚ್ಚರಿಕೆ ವಹಿಸಿ ಅರ್ಹತೆಯುಳ್ಳವರು ಮೂರನೇ ಡೋಸ್ ಪಡೆದುಕೊಳ್ಳಬೇಕು. ಎರಡನೇ ಡೋಸ್ ಬಾಕಿ ಇರುವವರು ಕೂಡಲೇ ತೆಗೆದುಕೊಳ್ಳಬೇಕು” ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ರೇಖಾಉಮೇಶ್, ಉಪಾಧ್ಯಕ್ಷೆ ಸುಹಾಸಿನಿ, ತಹಶೀಲ್ದಾರ್ ಹನುಮಂತರಾಯಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಕಬಾಡೆ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸ್ವಾತಿ, ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್, ಹಿರಿಯ ಆರೋಗ್ಯ ನಿರೀಕ್ಷಕ ಶ್ರೀನಿವಾಸರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶಪ್ಪ, ಮುರಳಿ, ನಾಗರಾಜ್, ದೇವರಾಜ್, ಪ್ರಕಾಶಗುಪ್ತ, ವೈದ್ಯಾಧಿಕಾರಿ ಉಪಸ್ಥಿತರಿದ್ದರು.