Chintamani : ಚಿಂತಾಮಣಿಯ ಉಪ್ಪರಪೇಟೆ ಬಳಿ ಗುರುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಮತ್ತು ಆಟೊ ನಡುವೆ ಡಿಕ್ಕಿ ಸಂಭವಿಸಿ ಕತ್ತರಿಗುಪ್ಪೆ ಗ್ರಾಮದ ಸಂತೋಷ್(20) ಸ್ಥಳದಲ್ಲೇ ಮೃತಪಟ್ಟಿದ್ದು ಮತ್ತು ಆಟೊ ಚಾಲಕ ನರಸಿಂಹ ಮೂರ್ತಿ ಕೋಲಾರದ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆಟೊದಲ್ಲಿದ್ದ ವಿದ್ಯಾರ್ಥಿಗಳಾದ ಹುಸೇನಪುರದ ಹೇಮಂತಕುಮಾರ್, ಚಾಂಡ್ರಹಳ್ಳಿಯ ಕೆಂಪರೆಡ್ಡಿ, ಕತ್ತರಿಗುಪ್ಪೆಯ ಮಧು ಗಾಯಗೊಂಡಿದ್ದಾರೆ.
ಚಿಕ್ಕಬಳ್ಳಾಪುರದಿಂದ ಚಿಂತಾಮಣಿಗೆ ಬರುತ್ತಿದ್ದ ಸರ್ಕಾರಿ ಬಸ್ ಗೆ ಚಿಂತಾಮಣಿಯಿಂದ ಜನರನ್ನು ತುಂಬಿಸಿಕೊಂಡು ಕತ್ತರಿಗುಪ್ಪೆ ಗ್ರಾಮಕ್ಕೆ ಹೋಗುತ್ತಿದ್ದ ಆಟೊ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಇಬ್ಬರನ್ನು ಕೋಲಾರಕ್ಕೆ ಹಾಗೂ ಒಬ್ಬರನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.