Chintamani : ಚಿಂತಾಮಣಿ ತಾಲ್ಲೂಕಿನ ಮಾಡಿಕೆರೆ ಲಕ್ಷ್ಮಿನರಸಿಂಹ ರಥೋತ್ಸವ (Madikere Lakshmi Narasimha Rathotsava) ಅಪಾರ ಜನಸ್ತೋಮದ ನಡುವೆ ಶನಿವಾರ ವಿಜೃಂಭಣೆಯಿಂದ ನೆರವೇರಿತು. ದೇವಾಲಯದಲ್ಲಿ ಲಕ್ಷ್ಮಿನರಸಿಂಹ ಸ್ವಾಮಿಗೆ ಬೆಳಿಗ್ಗೆ ಸುಪ್ರಭಾತ, ಪಂಚಾಮೃತಾಭಿಷೇಕ, ಕಲಶಾರಾಧನೆ, ಹೋಮ, ಅಷ್ಟಾವಧಾನ ಸೇವೆ, ಪೂರ್ಣಾಹುತಿ, ಬಲಿಹರಣ ಮತ್ತಿತರ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಮಧ್ಯಾಹ್ನ 1:30ಕ್ಕೆ ಲಕ್ಷ್ಮಿನರಸಿಂಹಸ್ವಾಮಿ ಉತ್ಸವ ಮೂರ್ತಿಯನ್ನು ಮಂಗಳ ವಾದ್ಯಗಳೊಂದಿಗೆ ಶಾಸ್ತ್ರೋಕ್ತವಾಗಿ ಕರೆತಂದು ಅಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ಅರ್ಚಕ ವೃಂದದವರು ರಥದಲ್ಲಿ ಮತ್ತೊಮ್ಮೆ ಅಲಂಕಾರ ಪೂಜೆ ನೆರವೇರಿಸಿ ದೇವಾಲಯದ ಟ್ರಸ್ಟ್ ಪದಾಧಿಕಾರಿಗಳು ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದಲ್ಲಿ ತಮಟೆ, ಕೋಲಾಟ, ಗಾರುಡಿಗೊಂಬೆ ಕುಣಿತ ಸೇರಿದಂತೆ ಹಲವು ತಂಡಗಳು ಮೆರಗು ನೀಡಿದವು. ಭಕ್ತರು ರಥಕ್ಕೆ ಧವನ, ಬಾಳೆಹಣ್ಣನ್ನು ಭಕ್ತಿಯಿಂದ ಸಮರ್ಪಿಸಿದರು.