Home News Chintamani ಶಾಲಾ ಮಕ್ಕಳ ಸುರಕ್ಷತೆ ಖಾತ್ರಿಗೊಳಿಸಲು ಖಾಸಗಿ ಸಂಸ್ಥೆಗಳು ಜವಾಬ್ದಾರಿ ವಹಿಸಬೇಕು

ಶಾಲಾ ಮಕ್ಕಳ ಸುರಕ್ಷತೆ ಖಾತ್ರಿಗೊಳಿಸಲು ಖಾಸಗಿ ಸಂಸ್ಥೆಗಳು ಜವಾಬ್ದಾರಿ ವಹಿಸಬೇಕು

0
Chintamani Police School Children Transport Safety Meeting

Chintamani, chikkaballapur, Karnataka : “ಖಾಸಗಿ ಶಾಲೆಗಳು ಮತ್ತು ಕಾಲೇಜುಗಳು ವಿದ್ಯಾರ್ಥಿಗಳ ದಾಖಲಾತಿಗಷ್ಟೇ ಸೀಮಿತವಾಗದೆ, ಅವರ ಸುರಕ್ಷತೆಯ ಮೇಲೂ ಪೂರ್ಣ ಜವಾಬ್ದಾರಿ ವಹಿಸಬೇಕು,” ಎಂದು DySP ಪಿ. ಮುರಳೀಧರ್ ಖಡಕ್ ಎಚ್ಚರಿಕೆ ನೀಡಿದರು.

ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬುರುಡಗುಂಟೆ ಬಳಿಯ ಶಾಲಾ ವಾಹನ ಮತ್ತು ಬೈಕ್ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ, ಸೋಮವಾರ ನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರ ಸಭೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಡಿವೈಎಸ್‌ಪಿ ಮುರಳೀಧರ್ ಅವರು, “ನಗರದಲ್ಲಿನ ಒಟ್ಟು ಶಾಲಾ ಮತ್ತು ಕಾಲೇಜು ವಾಹನಗಳಲ್ಲಿ 63 ವಾಹನಗಳಿಗೆ ಎಫ್.ಸಿ. ಹಾಗೂ ವಿಮೆ ಅವಧಿ ಮುಗಿದಿದೆ, ಆದರೆ ಅವುಗಳನ್ನು ನವೀಕರಿಸಿಲ್ಲ. ಸಾರಿಗೆ ಇಲಾಖೆಯ ನೋಟಿಸ್‌ನ ಬಳಿಕವೂ ಪ್ರತಿಕ್ರಿಯೆ ಸಿಕ್ಕಿಲ್ಲ. ಇಂತಹ ನಿರ್ಲಕ್ಷ್ಯ ಮುಂದುವರಿಸಿದರೆ ವಾಹನಗಳನ್ನು ವಶಕ್ಕೆ ಪಡೆದು ಮೊಕದ್ದಮೆ ದಾಖಲಿಸಲಾಗುವುದು,” ಎಂದು ಎಚ್ಚರಿಸಿದರು.

ಅವರು ಮುಂದುವರೆದು — “ಇತ್ತೀಚಿನ ಅಪಘಾತದಲ್ಲಿ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಇದೇ ಸ್ಥಿತಿ ನಮ್ಮ ಮನೆಯವರಿಗಾದರೆ ಹೇಗಿರುತ್ತದೆ ಎಂದು ಯೋಚಿಸಿ. ಅಪ್ರಾಪ್ತ ವಯಸ್ಕರಿಗೆ ವಾಹನ ನೀಡುವುದು ಅಪರಾಧ. ಒಂದು ಆಟೋದಲ್ಲಿ 20–25 ಮಕ್ಕಳನ್ನು ಸಾಗಿಸುವುದು ಮಾನವೀಯತೆ ವಿರುದ್ಧವಾಗಿದೆ,” ಎಂದರು.

ಪೋಷಕರಿಗೆ, ಶಾಲಾ ಆಡಳಿತ ಮಂಡಳಿಗಳಿಗೆ ಮಕ್ಕಳ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಿದರು. ಶಾಲಾ ವಾಹನಗಳಲ್ಲಿ ನಿಗದಿತ ಸುರಕ್ಷತಾ ಮಾನದಂಡಗಳನ್ನು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಬ್ರೇಕ್ ಇನ್‌ಸ್ಪೆಕ್ಟರ್ ಪೂಜಾ ಮಾತನಾಡಿ, “63 ವಾಹನಗಳಿಗೆ ಎಫ್.ಸಿ ಮತ್ತು ಇನ್ಶೂರೆನ್ಸ್ ಇಲ್ಲ. ಕೇವಲ ಐದು ವಾಹನಗಳಷ್ಟೇ ನವೀಕರಿಸಲಾಗಿದೆ. ಹಲವು ಶಾಲೆಗಳು ತೆರಿಗೆ ಪಾವತಿಸದೇ ಕಾಲೇಜುಗಳಿಗೆ ವಾಹನಗಳನ್ನು ಓಡಿಸುತ್ತಿವೆ. ಪ್ರತಿಯೊಂದು ವಾಹನಕ್ಕೂ ಚಾಲಕ ಪರವಾನಗಿ, ಮಹಿಳಾ ಅಟೆಂಡರ್ ಮತ್ತು ಸುರಕ್ಷತಾ ಮಾಹಿತಿ ಕಡ್ಡಾಯವಾಗಿರಬೇಕು,” ಎಂದು ತಿಳಿಸಿದರು.

ಸಭೆಯಲ್ಲಿ ಇನ್‌ಸ್ಪೆಕ್ಟರ್ ವಿಜಯಕುಮಾರ್, ಶಾಲಾ ಮತ್ತು ಕಾಲೇಜುಗಳ ಮುಖ್ಯಸ್ಥರು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

error: Content is protected !!
Exit mobile version