Chintamani : ಚಿಕ್ಕಮಗಳೂರು ಜಿಲ್ಲಾ ಪಂಚಾಯತಿ ಮತ್ತು ಕೃಷಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ, ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯ ಕೃಷಿ ತರಬೇತಿ ಕೇಂದ್ರವು ರಾಜ್ಯ ಮಟ್ಟದ ಕೃಷಿ ಅಧ್ಯಯನ (State Level Agriculture Tour) ಪ್ರವಾಸವನ್ನು ಹಮ್ಮಿಕೊಂಡಿತ್ತು. ಈ ಪ್ರವಾಸದ ಭಾಗವಾಗಿ, ತರೀಕೆರೆ ತಾಲ್ಲೂಕಿನ ರೈತರ ತಂಡವು ಪ್ರಗತಿಪರ ಸಾವಯವ ರೈತ ರಾಧಾಕೃಷ್ಣ ಅವರ ಜಮೀನಿಗೆ ಭೇಟಿ ನೀಡಿತು.
ಪ್ರವಾಸದ ವೇಳೆ, ರೈತರು ಜಮೀನಿನಲ್ಲಿ ಇರುವ ಕೃಷಿ ಪ್ರಯೋಗಾಲಯ, ಅರಣ್ಯ ಕೃಷಿ, ಸಾವಯವ ಬೆಳೆಗಳು, ತೋಟಗಾರಿಕೆ ಬೆಳೆಗಳು, ಮತ್ತು ವಿವಿಧ ಉಪಕಸುಬುಗಳ ಬಗ್ಗೆ ಅಧ್ಯಯನ ಮಾಡಿದರು. ವಿಶೇಷವಾಗಿ ವೆಚ್ಚವಿಲ್ಲದೆ ಹೆಚ್ಚಿನ ಲಾಭ ತರುವ ಹುಣಸೆ, ಜಂಬು, ನೇರಳೆ ಮರಗಳು, ಕೃಷಿ ಹೊಂಡದಲ್ಲಿ ನೀರಿನ ಸಮರ್ಪಕ ಬಳಕೆ ಜೊತೆಗೆ ಮೀನು ಸಾಕಾಣಿಕೆ, ಹೊಂಡದ ಸುತ್ತ ಹುಲ್ಲು ಬೆಳೆಸುವ ವಿಧಾನ, ಜೇನು, ಕುರಿ-ಮೇಕೆ, ಕೋಳಿ, ಹಸು, ನಾಟಿ ಕೋಳಿ ಸೇರಿದಂತೆ ಇನ್ನಿತರ ಸಹಾಯಕ ಕೃಷಿ ಚಟುವಟಿಕೆಗಳನ್ನು ವೀಕ್ಷಿಸಿದರು.
ರಾಧಾಕೃಷ್ಣ ಮಾತನಾಡಿ, “ರೈತರು ಸ್ವಾವಲಂಬಿಗಳಾಗಬೇಕು. ಯಾವುದೇ ಕಾರಣಕ್ಕೂ ತಮ್ಮ ಸಹಜ ಬದುಕನ್ನು ಕಳೆದುಕೊಳ್ಳಬಾರದು. ಸಾವಯವ ಮತ್ತು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡರೆ ರೈತರು ಎಂದಿಗೂ ನಷ್ಟಕ್ಕೆ ಸಿಲುಕುವುದಿಲ್ಲ. ಒಂದಲ್ಲ ಒಂದು ಕಸುವಿನಿಂದ ಲಾಭದಾಯಕ ಆದಾಯ ಪಡೆಯಬಹುದು, ಇದರಿಂದ ಉತ್ತಮ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು” ಎಂದು ಸಲಹೆ ನೀಡಿದರು.
ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರು. ಪರಸ್ಪರ ಅಭಿಪ್ರಾಯ ವಿನಿಮಯದ ಮೂಲಕ ಪ್ರವಾಸವು ಅರ್ಥಪೂರ್ಣವಾಗಿ ಮುಕ್ತಾಯವಾಯಿತು.