Chikkaballapur : ಚಿಕ್ಕಬಳ್ಳಾಪುರ ನಗರ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಕಾಂಗ್ರೆಸ್ (Congress) ಪಕ್ಷದ ವತಿಯಿಂದ ಯುವ ಸಂವಾದ (Yuva Matha) (Pehla Vote) ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ (Raksha Ramaiah S) ” ದೇಶದ ದಿಕ್ಕು ಬದಲಿಸುವ ಶಕ್ತಿ ಇರುವ ಯುವ ಸಮುದಾಯ ಉತ್ತಮ ರಾಜ್ಯ, ದೇಶ ಕಟ್ಟಲು ಮತ ಚಲಾಯಿಸಬೇಕು. ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಬಾಗೇಪಲ್ಲಿ, ನೆಲಮಂಗಲ ಸೇರಿದಂತೆ ಬೆಂಗಳೂರು ಸುತ್ತಮುತ್ತಲಿನ ತಾಲ್ಲೂಕುಗಳ ಜನರು ಉದ್ಯೋಗಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದಾರೆ. ಇದು ತಪ್ಪಿ ಉದ್ಯೋಗದ ಅವಕಾಶಗಳು ಚಿಕ್ಕಬಳ್ಳಾಪುರದಲ್ಲಿ ದೊರೆಯುವಂತೆ ಆಗಬೇಕು. ಚಿಕ್ಕಬಳ್ಳಾಪುರವನ್ನು ದುಬೈ, ಸಿಂಗಪುರ ಮಾಡುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ. ಬೆಂಗಳೂರಿಗಿಂತಲೂ ಮುಂದುವರಿಯುವಂತೆ ಮಾಡಬೇಕು ಎನ್ನುವ ಆಲೋಚನೆ ಇದೆ. ಕಾಲೇಜು ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮತ್ತು ಆ ಮೂಲಕ ಪರಿಹಾರ ಕಂಡುಕೊಳ್ಳಲು ‘ಯುವ ಮತ’ ಎನ್ನುವ ಡಿಜಿಟಲ್ ವೇದಿಕೆ ಕಲ್ಪಿಸಲಾಗಿದ್ದು ಯುವ ಮತದಾರರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಕಾಲೇಜಿನಲ್ಲಿರುವ ಸಮಸ್ಯೆಗಳನ್ನು ಗಮನಕ್ಕೆ ತರಬಹುದು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಪ್ರದೀಪ್ ಈಶ್ವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ, ಎನ್‌ಎಸ್‌ಯುಐ ಜಿಲ್ಲಾ ಅಧ್ಯಕ್ಷ ಪ್ರಸನ್ನ, ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕುಬೇರ್ ಅಚ್ಚು , ಜಿಲ್ಲಾ ಕಾಂಗ್ರೆಸ್ ವಕ್ತಾರ ಭರಣಿ ವೆಂಕಟೇಶ್, ಕಾಂಗ್ರೆಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ರಫೀವುಲ್ಲಾ, ಮುಖಂಡರಾದ ಮಮತಾ ಮೂರ್ತಿ, ಎಂ.ಜಯರಾಂ ಮತ್ತಿತರರು ಉಪಸ್ಥಿತರಿದ್ದರು.