Gauribidanur : ರಾಜ್ಯ ಸರ್ಕಾರದ ಆದೇಶದನ್ವಯ ಜಿಲ್ಲಾಧಿಕಾರಿಗಳು ಪ್ರತಿ ಮಂಗಳವಾರ ಜಿಲ್ಲೆಯ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಬೇಕಾಗಿರುವ ಹಿನ್ನೆಲೆ ಗೌರಿಬಿದನೂರು ತಹಶೀಲ್ದಾರ್ ಕಚೇರಿಗೆ ಜಿಲ್ಲಾಧಿಕಾರಿ ಎನ್.ಎಂ ನಾಗರಾಜ್ (Deputy Commissioner) (DC) (N M Nagaraj) ಭೇಟಿ ನೀಡಿ ತಾಲ್ಲೂಕು ಆಡಳಿತದ ಕಚೇರಿಯ ಸಮಸ್ಯೆ, ಆಡಳಿತ ಕಾರ್ಯಗಳ ಪ್ರಗತಿ ಪರಿಶೀಲಿಸಿ, ಸಾರ್ವಜನಿಕರ ಕುಂದುಕೊರತೆಗಳನ್ನು ಕೇಳಿದರು.
ಆಧಾರ್ ನೋಂದಣಿ, ಪಹಣಿ, ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆ ಹಾಗೂ ಕಡತಗಳ ವಿಲೇವಾರಿ ಪ್ರಕ್ರಿಯೆಗಳನ್ನು ಪರಿಶೀಲಿಸಿ ಮೂಲ ಸೌಕರ್ಯಗಳ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳಿಗೆ ತಾಲ್ಲೂಕಿನ ವಿವಿಧ ಗ್ರಾಮಗಳ ಜನರು ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತಂದರು. ಆಗ, ವಿನಾಕಾರಣ ಸಾರ್ವಜನಿಕರನ್ನು ಕಚೇರಿಗೆ ಅಲೆದಾಡಿಸದೇ ತ್ವರಿತ ಸೇವೆ ನೀಡಿ ಸಮಸ್ಯೆಗಳನ್ನು ತಕ್ಷಣವೇ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಧಿಕಾರಿ ನೀಡಿದರು.
ತಾಲ್ಲೂಕು ಆಡಳಿತದಲ್ಲಿನ ಸಿಬ್ಬಂದಿಯ ಕೊರತೆ, ಸಾರ್ವಜನಿಕರಿಗೆ ಒದಗಿಸುವ ಸೇವೆ, ಜನರ ಕುಂದು ಕೊರತೆಗಳನ್ನು, ಆಡಳಿತದ ಕಾರ್ಯ ವೈಖರಿಯನ್ನು ಪರಿಶೀಲನೆ ನಡೆಸಿ ಅದರ ಸುಧಾರಣೆಗೆ ಅಗತ್ಯ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸಲಹೆ, ಸೂಚನೆಗಳನ್ನು ನೀಡಿದರು.
ತಹಶೀಲ್ದಾರ್ ಎಚ್.ಶ್ರೀನಿವಾಸ್ ಸೇರಿದಂತೆ ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.