Bagepalli : ಬಾಗೇಪಲ್ಲಿ ಪಟ್ಟಣದ ಸುಂದರಯ್ಯ ಭವನದಲ್ಲಿ ಶನಿವಾರ ಜಿಲ್ಲಾ CITU ವತಿಯಿಂದ ವಿಸ್ತೃತ ಸಭೆಯನ್ನು (Meeting) ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಾತನಾಡಿದ ಸಿಐಟಿಯು ರಾಜ್ಯ ಸಮಿತಿ ಅಧ್ಯಕ್ಷೆ ಎಸ್.ವರಲಕ್ಷ್ಮಿ “ರಾಜ್ಯದಲ್ಲಿ ಅಂಗನವಾಡಿ, ಬಿಸಿಊಟ, ಆಶಾ, ಗ್ರಾಮ ಪಂಚಾಯಿತಿ ನೌಕರರು, ಸರ್ಕಾರಿ ಕಚೇರಿಗಳಲ್ಲಿ ಗುತ್ತಿಗೆ , ದಿನಗೂಲಿ ನೌಕರರಾಗಿ ದುಡಿದು ದೇಶ ಹಾಗೂ ರಾಜ್ಯದ ಅರ್ಥಿಕತೆಗೆ ಬಲ ತುಂಬಿತ್ತಿದ್ದಾರೆ. ದುಡಿಯುವ ಶ್ರಮಿಕರಿಗೆ, ಅಸಂಘಟಿತ ವಲಯದವರಿಗೆ ಕನಿಷ್ಠ ವೇತನ, ಕೆಲಸ ಕಾಯಂ, ಸೇವಾ ಭದ್ರತೆ, ಪಿಂಚಿಣಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಮತ್ತು ಹೈ ಕೋರ್ಟ್ ಎಚ್ಚರಿಕೆ ನೀಡಿದರೂ, ಸರ್ಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ. ಇದರಿಂದ ಕಾರ್ಮಿಕರು ಒಗ್ಗಟ್ಟಾಗಬೇಕು. ತಮ್ಮ ಹಕ್ಕು, ಜೀವನ ಸುಧಾರಣೆಗಾಗಿ, ಕುಟುಂಬಗಳ ನಿರ್ವಹಣೆಗಾಗಿ ಎಲ್ಲಾ ಅಸಂಘಟಿತ ಕಾರ್ಮಿಕರು, ಗುತ್ತಿಗೆ, ದಿನಗೂಲಿ ನೌಕರರು ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ಮಾರ್ಚ್3 ರಿಂದ 7 ವರೆಗೆ ಸಿಐಟಿಯು ನೇತೃತ್ವದಲ್ಲಿ ಮಾರ್ಚ್ 3 ರಂದು ಗ್ರಾಮ ಪಂಚಾಯಿತಿ ನೌಕರರು, ಮಾರ್ಚ್ 4 ರಂದು ಅಕ್ಷರ ದಾಸೋಹ ಕಾರ್ಮಿಕರು, ಮಾರ್ಚ್ 5 ರಂದು ಕಟ್ಟಡ ಕಾರ್ಮಿಕರು, ಮಾರ್ಚ್ 6 ರಂದು ಸಂಘಟಿತ ವಲಯದ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಮಾರ್ಚ್ 7 ರಂದು ಅಂಗನವಾಡಿ ಕಾರ್ಮಿಕರ ಹೋರಾಟದಲ್ಲಿ ಭಾವಹಿಸಿ” ಎಂದು ಹೇಳಿದರು.
ಸಿಐಟಿಯು ಜಿಲ್ಲಾ ಅಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ, ಕಾರ್ಯದರ್ಶಿ ಸಿದ್ದಗಂಗಪ್ಪ, ಜಿಲ್ಲಾ ಖಜಾಂಚಿ ಕೆ.ರತ್ನಮ್ಮ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ ಮತ್ತಿತರರು ಉಪಸ್ಥಿತರಿದ್ದರು.