Jangamakote, Sidlaghatta : ದೇಶದ ಜನರಿಗೆ ಅನ್ನ ನೀಡುತ್ತಿರುವ ರೈತ ಇಂದು ತನ್ನ ಉಳಿವಿಗಾಗಿ ಹೋರಾಟದ ಹಾದಿ ಹಿಡಿದಿರುವುದು ವಿಪರ್ಯಾಸ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟಿ ಕ್ರಾಸ್ ಬಳಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ವತಿಯಿಂದ ಹಮ್ಮಿಕೊಂಡಿದ್ದ ರೈತ ಸಂಘದ ಸದಸ್ಯತ್ವ ಹಾಗೂ ಹಸಿರು ಶಾಲು ಧೀಕ್ಷಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರೈತರ ಸಂಕಷ್ಟಗಳಿಗೆ ನೆರವಾಗಲು ಮೀನಾಮೇಷ ಎಣಿಸುವ ಸರ್ಕಾರಗಳಿಗೆ ತಕ್ಕ ಪಾಠ ಕಲಿಸಲು ರೈತರು ಒಗ್ಗಟ್ಟಾಗಿ ಹೋರಾಟ ಮಾಡಬೇಕು ಎಂದರು.
ಸರ್ಕಾರಗಳು ರೈತ ವಿರೋಧಿ ನೀತಿಗಳನ್ನು ಕೈಬಿಡಬೇಕು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು. ಜನವಿರೋಧಿ ಕಾನೂನುಗಳನ್ನು ರಾಜ್ಯ, ಕೇಂದ್ರ ಸರ್ಕಾರ ಜಾರಿಗೆ ತರುವ ಮೂಲಕ ರೈತರನ್ನು ಪಾತಾಳಕ್ಕೆ ದೂಡುತ್ತಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಬೆಂಗಳೂರು ಗ್ರಾಮಾಂತರ ಪ್ರದೇಶದ ಸುತ್ತಮುತ್ತಲು ಇರುವ ಹಳ್ಳಿಗಳಲ್ಲಿ ಈ ಹಿಂದೆ ಶೇ. ನೂರರಷ್ಟು ರೈತರು ಇದ್ದರು. ಇದೀಗ ಶೇ 50 ಕ್ಕೆ ಇಳಿದಿದ್ದಾರೆ. ಇಂತಹ ಪರಿಸ್ಥಿತಿ ಬೆಂಗಳೂರಿಗೆ ಕೂಗಳೆತ ದೂರದಲ್ಲಿರುವ ಜಂಗಮಕೋಟೆ ಭಾಗದ ರೈತರಿಗೆ ಬರಬಾರದು. ಸರ್ಕಾರ ರೈತ ವಿರೋಧಿ ನೀತಿಗಳನ್ನು ವಾಪಸ್ ಪಡೆಯಬೇಕು. ಶಿಡ್ಲಘಟ್ಟ ತಾಲ್ಲೂಕು ರೇಷ್ಮೆ ಹಾಗೂ ಹಾಲು ಉತ್ಪಾದನೆ ಮಾಡುತ್ತಿರುವ ರೈತರಿಗೆ ಸೂಕ್ತ ಬೆಲೆ ನೀಡಬೇಕು. ರೈತರ ಬೆಳೆಗಳಿಗೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗಳನ್ನು ಈ ಹಿಂದೆ ಯಾವ ರೀತಿ ವಿತರಿಸುತ್ತಿದ್ದರೋ ಅದೇ ರೀತಿ ನಮಗೆ ವಿತರಿಸಬೇಕು. ಇಷ್ಟೇ ಅಲ್ಲ ಇನ್ನು ಅನೇಕ ರೀತಿಯಾದಂತಹ ಸಮಸ್ಯೆಗಳು ರೈತರಿಗೆ ಇದ್ದು, ಅಂತಹ ಸಮಸ್ಯೆಗಳಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರ್ ಬಿ.ಎನ್.ಸ್ವಾಮಿ ರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಎನ್.ಸ್ವಾಮಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರಾಪುರ ಮುನಿನಂಜಪ್ಪ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ರಾಮಚಂದ್ರಪ್ಪ.ಎ, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣಪ್ಪ, ಸುಂಡ್ರಹಳ್ಳಿ ಬೀರಪ್ಪ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ರೈತ ಸಂಘದ ಪದಾಧಿಕಾರಿಗಳು ಹಾಜರಿದ್ದರು.