Anur, Sidlaghatta : ಮಹಿಳೆಯರ ಸಬಲೀಕರಣ ಹಾಗೂ ಉನ್ನತಿಕರಣಗೊಳಿಸುವುದೇ ನಮ್ಮ ಮುಖ್ಯ ಉದ್ದೇಶ. ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಹಿಳಾ ಸಬಲೀಕರಣ ಅರಿವು ಕಾರ್ಯಕ್ರಮ ಹಾಗು ಮಹಿಳಾ ದೌರ್ಜನ್ಯ ಮುಕ್ತ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿ.ಪಂ ಮುಖ್ಯ ಯೋಜನಾಧಿಕಾರಿ ಧನುರೇಣುಕಾ ಹೇಳಿದರು.
ತಾಲ್ಲೂಕಿನ ಆನೂರು ಗ್ರಾಮದಲ್ಲಿ ಬುಧವಾರ ತಾಲ್ಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಅರಿವು ಹಾಗು ದೌರ್ಜನ್ಯಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಹಿಳೆಯರಿಗಾಗಿ ಮೀಸಲಾದ ಕಾರ್ಯಕ್ರಮ ಇದಾಗಿದ್ದು, ಈ ಕಾರ್ಯಕ್ರಮದಲ್ಲಿ ಮಹಿಳೆಯರು, ಗರ್ಭಿಣಿಯರು ಹಾಗು ಮಹಿಳೆಯರಿಗೆ ಉಂಟಾಗುವ ಸಮಸ್ಯೆಗಳಿಗೆ ಆರೋಗ್ಯ ಇಲಾಖೆ ಸೇರಿದಂತೆ ಯಾವ ಯಾವ ಇಲಾಖೆ ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದರ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಮಹಿಳೆಯರು ಮತ್ತಷ್ಟು ಭಾಗವಹಿಸುವಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಹಿತದೃಷ್ಠಿಯಿಂದ ತಾ.ಪಂ ಅನಿರ್ಭಂದಿತ ಅನುಧಾನದಲ್ಲಿ ಪ್ರಸಕ್ತ ವರ್ಷದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇದರ ಮೂಲ ಉದ್ದೇಶ ಮಹಿಳಾ ಸಬಲೀಕರಣ ಆಗಿದೆ ಎಂದರು.
ತಾ.ಪಂ ಇಓ ಜಿ.ಮುನಿರಾಜ ಮಾತನಾಡಿ, ಅನಿರ್ಬಂಧಿತ ಹಣಕಾಸು ಯೋಜನೆಯಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಿಸಲಿಟ್ಟ ಅನುದಾನದಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಈ ಯೋಜನೆಯನ್ನು ಮೊದಲಬಾರಿಗೆ ಆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಿಳೆಯರಿಗೆ ಅವರ ಹಕ್ಕುಗಳು ಹಾಗು ಕರ್ತವ್ಯಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಸೇರಿದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಹಿಳೆಯರಿಗೆ ಸಿಗಬೇಕಾದ ಸವಲತ್ತುಗಳನ್ನು ಕಲ್ಪಿಸಲು ಈ ಕಾರ್ಯಕ್ರಮ ಅನುಕೂಲಕರವಾಗಿದೆ ಎಂದರು.
ಗ್ರಾಮದ ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಸಿಕೊಡಲಾಯಿತು.
ಈ ಸಂದರ್ಭದಲ್ಲಿ ಸಿಡಿಪಿಓ ನೌತಾಜ್, ಮೇಲೂರು ಆಸ್ಪತ್ರೆಯ ವೈದ್ಯ ಡಾ.ರಮೇಶ್, ಗ್ರಾ.ಪಂ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷೆ ನೇತ್ರಾವತಿ, ಆರೋಗ್ಯ ಇಲಾಖೆಯ ಮುನಿರತ್ನಮ್ಮ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಶಿವಕುಮಾರ್, ಪಿಡಿಓ ಕಾತ್ಯಾಯಿನಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.