Sidlaghatta : ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಆಸುಪಾಸಿನ ಗ್ರಾಮಗಳ ರೈತರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಏಕಾ ಏಕಿ ತಮ್ಮ ಸಾಗುವಳಿ ಜಮೀನುಗಳಿಗೆ ಬೇಲಿ ಹಾಕುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆಗೆ ತಡೆ ಹಾಕುವಂತೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಸಂಚಾಲಕ ರಾಜೀವ್‌ಗೌಡ ನೇತೃತ್ವದಲ್ಲಿ ತಲಕಾಯಲಬೆಟ್ಟದ ಆಸುಪಾಸಿನ ರೈತರು ಸಚಿವ ಈಶ್ವರ್ ಖಂಡ್ರೆ ಅವರನ್ನು ಬೆಂಗಳೂರಿನ ಅರಣ್ಯ ಭವನದಲ್ಲಿ ಭೇಟಿ ಮಾಡಿ ಸಾಗುವಳಿ ಜಮೀನುಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಬೇಲಿ ಹಾಕುವುದಕ್ಕೆ ಕಡಿವಾಣ ಹಾಕಬೇಕೆಂದು ಮನವಿ ಮಾಡಿದರು.
ಈ ವೇಳೆ ರಾಜೀವ್‌ಗೌಡ ಅವರು ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ಸಚಿವರಿಗೆ ವಿವರಿಸಿ, ತಲಕಾಯಲಬೆಟ್ಟದ ಆಸುಪಾಸು ಗ್ರಾಮಗಳ ರೈತರು ಹತ್ತಾರು ವರ್ಷಗಳಿಂದಲೂ ಸಾಗುವಳಿ ನಡೆಸುತ್ತಾ ಬದುಕನ್ನು ಕಟ್ಟಿಕೊಂಡಿದ್ದಾರೆ.
ಅನೇಕರಿಗೆ ಸಾಗುವಳಿ ಚೀಟಿ ವಿತರಣೆ ಆಗಿದ್ದು ಕೊಳವೆ ಬಾವಿ ಕೊರೆಸಿ ನಾನಾ ಹೂವು ಹಣ್ಣು ತರಕಾರಿಗಳನ್ನು ಬೆಳೆದು ಬದುಕನ್ನು ಸಾಗಿಸುತ್ತಿದ್ದಾರೆ. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಏಕಾ ಏಕಿ ಬಂದು ರೈತರ ಜಮೀನುಗಳಲ್ಲಿ ಜೆಸಿಬಿಗಳಿಂದ ಟ್ರಂಚ್ ನಿರ್ಮಿಸಿ ಬೇಲಿ ಹಾಕುತ್ತಿದ್ದಾರೆ.
ಮುಂಚಿತವಾಗಿ ಯಾವುದೆ ನೊಟೀಸ್ ನೀಡುತ್ತಿಲ್ಲ, ಜಮೀನಿನಲ್ಲಿ ಇರುವ ಬೆಳೆಯನ್ನು ಕಟಾವು ಮಾಡಿಕೊಳ್ಳಲು ಕೂಡ ಅವಕಾಶ ಕೊಡುತ್ತಿಲ್ಲ. ಕೇಳಿದರೆ ಇದು ಮೀಸಲು ಅರಣ್ಯದ ಜಾಗ ಆಗಿದೆ. 1935 ರಲ್ಲೆ ಮೀಸಲು ಅರಣ್ಯ ವ್ಯಾಪ್ತಿಗೆ ಈ ಜಮೀನುಗಳನ್ನು ಸೇರಿಸಲಾಗಿದೆ ಎನ್ನುತ್ತಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಆದೇಶದಂತೆ ಮೀಸಲು ಅರಣ್ಯದಲ್ಲಿನ ಎಲ್ಲ ಜಮೀನುಗಳನ್ನು ವಶಕ್ಕೆ ತೆಗೆದುಕೊಂಡು ಬೇಲಿ ಹಾಕಲಾಗುತ್ತಿದೆ ಎನ್ನುತ್ತಿರುವ ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸುವ ರೈತರನ್ನು ಪೊಲೀಸ್ ಬಲ ಉಪಯೋಗಿಸಿ ಒಕ್ಕಲೆಬ್ಬಿಸುವ ಕೆಲಸ ಅರಣ್ಯ ಅಧಿಕಾರಿಗಳು ಮಾಡುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಕೋರಿದರು.
ರೈತರು ತಮಗೆ ಮಂಜೂರು ಆಗಿರುವ ಜಮೀನಿನ ದಾಖಲೆಗಳನ್ನು ಸಂಬಂಧಿಸಿದ ಇಲಾಖೆಗೆ ಸಲ್ಲಿಸಲು ಅವಕಾಶ ನೀಡಬೇಕು. ಜಮೀನಿನಲ್ಲಿ ಬೆಳೆದ ಬೆಳೆ ಕಟಾವು ಮಾಡಿ ಅನುಭವಿಸಲು ಅವಕಾಶ ಇರಬೇಕು. ಬೇಲಿ ಹಾಕುವಾಗ ಜಮೀನಿನಲ್ಲಿ ಆಗಿರುವ ನಷ್ಟವನ್ನು ಅರಣ್ಯ ಇಲಾಖೆಯಿಂದ ಭರಿಸಬೇಕು. ಬೇಲಿ ಹಾಕುವ ಕೆಲಸವನ್ನು ಈ ತಕ್ಷಣದಿಂದಲೆ ನಿಲ್ಲಿಸಲು ತಾವು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದರು.
ರೈತರ ಪರವಾಗಿ ಸಮಸ್ಯೆಗಳನ್ನು ಹೇಳಿದ ರಾಜೀವ್‌ಗೌಡರ ಮನವಿ ಆಲಿಸಿದ ಸಚಿವ ಈಶ್ವರ್ ಖಂಡ್ರೆ ಅವರು, ರೈತರನ್ನು ಮಾತನಾಡಿ ಮಾಹಿತಿ ಪಡೆದುಕೊಂಡರು. ಈ ಬಗ್ಗೆ ಲಿಖಿತ ಮನವಿಯನ್ನು ನನಗೆ ನೀಡಿ ಈ ಕೂಡಲೆ ವಾಸ್ತವ ಸ್ಥಿತಿಗತಿಗಳ ವರದಿ ಪಡೆದು ಬಲವಂತವಾಗಿ ಒಕ್ಕಲೆಬ್ಬಿಸುವುದಕ್ಕೆ ಕಡಿವಾಣ ಹಾಕುತ್ತೇನೆ.
ಈ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡುತ್ತೇನೆ. ಜಮೀನಿನಲ್ಲಿ ಬೆಳೆದ ಬೆಳೆಗಳ ಕಟಾವಿಗೆ ನಿರ್ಬಂಧ ಹಾಕದಂತೆ ಆದೇಶಿಸುತ್ತೇನೆ. ಯಾವುದೆ ಕಾರಣಕ್ಕೆ ರೈತರು ಆತಂಕ ಪಡಬೇಡಿ ಎಂದು ಭರವಸೆ ನೀಡಿದರು.
ಈ ವೇಳೆ ರೈತರು ತಮಗೆ ಮಂಜೂರು ಆಗಿರುವ ಬಗರ್ ಹುಕುಂ ಸಾಗುವಳಿ ಚೀಟಿಗಳು, ಪಹಣಿ, ಜಮೀನಿನಲ್ಲಿ ಕೊರೆದ ಕೊಳವೆ ಬಾವಿಗಳು, ಬೆಳೆದ ಬೆಳೆಗಳ ಫೋಟೋ ಇನ್ನಿತರೆ ದಾಖಲೆಗಳಲ್ಲದೆ ನ್ಯಾಯಾಲಯದಿಂದ ತಂದಿರುವ ತಡೆ ಆಜ್ಞೆಯ ಆದೇಶ ಪ್ರತಿಗಳನ್ನು ರೈತರು ಸಚಿವರಿಗೆ ತೋರಿಸಿ ತಮ್ಮ ಅಳಲನ್ನು ತೋಡಿಕೊಂಡರು.
ಕಾಂಗ್ರೆಸ್ ಮುಖಂಡ ರಾಜೀವ್‌ಗೌಡ, ಮುಖಂಡರಾದ ಡಿ.ಪಿ.ನಾಗರಾಜ್, ತಲಕಾಯಲಬೆಟ್ಟ ನಾರಾಯಣಸ್ವಾಮಿ, ಪಾಂಡುರಂಗ, ಬಾಬಾ, ತಲಕಾಯಲಬೆಟ್ಟ ಆಸುಪಾಸಿನ ಗ್ರಾಮಗಳ ರೈತರು ಹಾಜರಿದ್ದರು.