Sidlaghatta : ರೈತರ ಅನುಭವದಲ್ಲಿರುವ ಜಮೀನಿಗೆ ಬೇಲಿ ಹಾಕಿ ವಶಕ್ಕೆ ಪಡೆದುಕೊಳ್ಳುವ ಮುನ್ನ ಅರಣ್ಯ ಅಧಿಕಾರಿಗಳು ತಹಶೀಲ್ದಾರ್ ಹಾಗೂ ಸಂಬಂಸಿದ ರೈತರಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕೆಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದ ಶ್ರೀಭೂನೀಳಾ ಸಮೇತ ವೆಂಕಟರಮಣಸ್ವಾಮಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ತಲಕಾಯಲಬೆಟ್ಟದ ಆಸುಪಾಸಿನ ರೈತರು, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಂಧಾನ ಸಭೆಯಲ್ಲಿ ಮಾತನಾಡಿದರು.
ಮೀಸಲು ಅರಣ್ಯ ಹಾಗೂ ಡೀಮ್ಡ್ ಅರಣ್ಯ ಇರಬಹುದು, ರೈತರು ಈಗಾಗಲೆ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ವಶಕ್ಕೆ ತೆಗೆದುಕೊಂಡು ಬೇಲಿ ನಿರ್ಮಿಸುವುದಕ್ಕೂ ಮೊದಲು ಕಡ್ಡಾಯವಾಗಿ ಅರಣ್ಯ ಅಧಿಕಾರಿಗಳು ತಹಶೀಲ್ದಾರರು ಹಾಗೂ ಜಮೀನಿನ ರೈತನಿಗೆ ಮಾಹಿತಿ ಕೊಡಲೇಬೇಕೆಂದರು.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ತಹಶೀಲ್ದಾರರು ಜಂಟಿ ಸರ್ವೆ ಮಾಡಿ ಮುಂದಿನ ಕ್ರಮ ತೆಗೆದುಕೊಳ್ಳಲಿ, ಏಕಾ ಏಕಿ ಕ್ರಮ ಬೇಡ, ರೈತರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಇಲಾಖೆ ಅಕಾರಿಗಳು ಪರಸ್ಪರ ಸೌಹಾರ್ಧತೆಯಿಂದ ಸಮಸ್ಯೆ ಬಗೆಹರಿಸಿಕೊಳ್ಳಬೇಕು.
ವಿನಾಕಾರಣ ಘರ್ಷಣೆ ಬೇಡ, ಶ್ರೀನಿವಾಸಪುರದಲ್ಲಿ ಆದಂತಹ ಘಟನೆ ಇಲ್ಲಿ ನಡೆಯುವುದು ಬೇಡ, ಇಲ್ಲಿನ ರೈತರು ಸಹನಾಶೀಲರಾಗಿದ್ದು ತಾಳ್ಮೆ ಕಳೆದುಕೊಳ್ಳದೆ ಅಧಿಕಾರಿಗಳ ಜತೆಗೆ ಕಾನೂನಿನ ಇತಿ ಮಿತಿಯಲ್ಲಿ ಸೌಹಾರ್ಧತೆಯುತವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳೋಣ ಎಂದರು.
ಈ ಬಗ್ಗೆ ಮುಂದೆ ಸದನದಲ್ಲಿ ನಾನು ಪ್ರಸ್ತಾಪಿಸುತ್ತೇನೆ, ರೈತರ ಪರ ಸದನದಲ್ಲಿ ಧ್ವನಿ ಎತ್ತುತ್ತೇನೆ, ರೈತರು ಯಾವುದೆ ಕಾರಣಕ್ಕೂ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಿ ಎಂದು ಮನವಿ ಮಾಡಿದರು.
ಚಿಕ್ಕಬಳ್ಳಾಪುರ ವಿಭಾಗದ ಎಸಿಎಫ್ ಶ್ರೀನಿವಾಸ್ ಮಾತನಾಡಿ, 1935 ರಲ್ಲಿಯೆ ಗುರ್ತಿಸಿದ ರಿಸರ್ವ್ ಫಾರೆಸ್ಟ್‌ನಲ್ಲಿ ಸಾಗುವಳಿ ಮಾಡುತ್ತಿರುವ ಜಮೀನುಗಳಿಗೆ ಮಾತ್ರವೇ ನಾವು ಬೇಲಿ ನಿರ್ಮಿಸುತ್ತಿದ್ದೇವೆ ಎಂದರು.
ಸಧ್ಯಕ್ಕೆ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವವರ ವಿರುದ್ದ ಯಾವುದೆ ಕ್ರಮವಿಲ್ಲ, ಶಾಸಕರು ಹೇಳಿದಂತೆ ನಾವು ಇನ್ನು ಮುಂದೆ ಮೀಸಲು ಅರಣ್ಯದಲ್ಲಿ ಸಾಗುವಳಿ ಜಮೀನಿಗೆ ಬೇಲಿ ಹಾಕುವುದಕ್ಕೂ ಮೊದಲು ತಹಶೀಲ್ದಾರರು, ರೈತರಿಗೆ ಮಾಹಿತಿ ನೀಡಿಯೆ ನಂತರ ಮುಂದಿನ ಕ್ರಮಕ್ಕೆ ಮುಂದಾಗುತ್ತೇವೆ ಎಂದರು.
ಶಿಡ್ಲಘಟ್ಟ ತಾಲ್ಲೂಕಿನಲ್ಲಿ 10,300 ಎಕರೆಯಷ್ಟು ಮೀಸಲು ಅರಣ್ಯ ಹಾಗೂ 14,810 ಎಕರೆಯಷ್ಟು ಡೀಮ್ಡ್ ಫಾರೆಸ್ಟ್ ಇದೆ. ಸಧ್ಯಕ್ಕೆ ಮೀಸಲು ಅರಣ್ಯದಲ್ಲಿ ಮಾತ್ರವೇ ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಆದೇಶದಂತೆ ನಮ್ಮ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ವಿವರಿಸಿದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ, ವಲಯ ಅರಣ್ಯ ಅಧಿಕಾರಿ ಸುಧಾಕರ್, ಮುಖಂಡರಾದ ಡಾ.ಧನಂಜಯರೆಡ್ಡಿ, ಬಂಕ್ ಮುನಿಯಪ್ಪ, ತಾದೂರು ರಘು, ರಾಮಚಂದ್ರರೆಡ್ಡಿ, ಸ್ಥಳೀಯ ರೈತರು ಹಾಜರಿದ್ದರು.