Bagepalli : ಬಾಗೇಪಲ್ಲಿ ಪಟ್ಟಣದ ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರು ಗ್ರಾಮ ದೇವತೆ ಗಂಗಮ್ಮದೇವಿ ಕರಗ (Gangamma Devi Karaga Mahotsava) ಮಹೋತ್ಸವ ಮತ್ತು ಹಜರತ್ ಶೇಖ್ ಹುಸೇನ್ ಷಾ ವಲಿಯವರ ಉರುಸ್ (Hazrat Sheikh Hussain Shah Wali Dargah) ಏಕಕಾಲದಲ್ಲಿ ಆಚರಿಸಲು ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ.
ಹುಸೇನ್ ಷಾ ವಲಿಯವರ ಸಂದಲ್-ಎ-ಷರೀಫ್ (ಗಂಧ) ಮೆರವಣಿಗೆ ಬಂದಾಗ ದೇವಾಲಯದ ಎಲ್ಲ ಪದಾಧಿಕಾರಿಗಳು ನಿಂತು ಸ್ವಾಗತಿಸಿ ಹಿಂದೂ ಸಂಸ್ಕತಿಯಂತೆ ಪೂಜೆ ಸಲ್ಲಿಸುವ ನಿರ್ಣಯ ಕೈಗೊಂಡರು. ಅದೇ ಸಂದರ್ಭದಲ್ಲಿ ಹೂವಿನ ಕರಗ ಹೊತ್ತು ಬಂದಾಗ ಜಾಮೀಯ ಮಸೀದಿ ಹಾಗೂ ಹುಸೇನ್ ಷಾ ವಲಿ ದರ್ಗಾಗೆ ಆಹ್ವಾನಿಸಿ ಇಸ್ಲಾಂ ಪದ್ಧತಿಯಂತೆ ಪ್ರಾರ್ಥನೆ ಸಲ್ಲಿಸಲು ನಿರ್ಣಯ ಕೈಗೊಳ್ಳಲಾಯಿತು.
ಕರಗ ಸಮಿತಿ ಹಿರಿಯ ಸದಸ್ಯ ಮತ್ತು ವಕೀಲ ಎ.ಜಿ.ಸುಧಾಕರ್ ಮಾತನಾಡಿ, ಕಳೆದ ನಲವತ್ತು ವರ್ಷಗಳಿಂದ ಹೂವಿನ ಕರಗ ಆಚರಿಸಿಕೊಂಡು ಬರುವ ಹಾಗೆಯೇ ಅರವತ್ತು ವರ್ಷಗಳಿಂದ ಹುಸೇನ್ ಷಾ ವಲಿಯವರ ಉರುಸ್ ಆಚರಿಸಿಕೊಂಡು ಬರಲಾಗುತ್ತಿದೆ. ಪ್ರತಿ ಬಾರಿ ಭಿನ್ನ ದಿನಾಂಕದಲ್ಲಿ ನಡೆಯುತ್ತಿದ್ದ ಇವೆರಡೂ ಕಾರ್ಯಕ್ರಮಗಳು ಈ ಬಾರಿ ಒಂದೇ ದಿನ ನಡೆಯಲಿದೆ.
ಮೇ ತಿಂಗಳ 12ರಂದು ಹಸಿ ಕರಗ, 13ರಂದು ದೀಪದಾರತಿ ಹಾಗೂ 14ರಂದು ಹೂವಿನ ಕರಗ ನಡೆಯಲಿದ್ದು ಮೇ 13ರಂದು ಹುಸೇನ್ ಷಾ ವಲಿಯವರ ಗಂಧದ ಮಹೋತ್ಸವ (ಸಂದಲ್-ಎ-ಷರೀಫ್) ಹಾಗೂ ಹೂವಿನ ಕರಗದ ದಿನದಂದೇ ಖವ್ವಾಲಿ ಕಾರ್ಯಕ್ರಮ ಮತ್ತು ಉರುಸ್ ನಡೆಯಲಿದೆ ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಬಿ.ಆರ್.ನರಸಿಂಹ ನಾಯ್ಡು, ಪ್ರಾಧ್ಯಾಪಕ ಡಾ.ಕೆ.ಎಂ.ನಯಾಜ್ ಅಹ್ಮದ್, ಜಾಮೀಯಾ ಮಸೀದಿ ಅಧ್ಯಕ್ಷ ಜಮೀರ್ ಅಹ್ಮದ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ, ಕನ್ನಡ ಕಲಾ ಸಂಘದ ಅಧ್ಯಕ್ಷ ಪಿ.ಎಸ್.ರಾಜೇಶ್, ದರ್ಗಾ ವಂಶಸ್ಥರಾದ ಜಾಕೀರ್ ಅಹ್ಮದ್, ಜಾಮೀಯಾ ಮಸೀದಿ ಕಾರ್ಯದರ್ಶಿ ಫರೀದ್ ಖಾನ್, ಸೂಫಿ ಧರ್ಮ ಗುರು ಇಸ್ಮಾಯಿಲ್ ಷಾ ಖಾದ್ರಿ, ದರ್ಗಾ ಸಮಿತಿ ಅಧ್ಯಕ್ಷ ಎಂ.ಕೆ.ಅಬ್ದುಲ್ ಮಜೀದ್, ಮುಖಂಡರಾದ ನಯಾಜ್, ಮನ್ಸೂರ್, ಜಾಕೀರ್, ಕರಗ ಸಮಿತಿಯ ಜಯಪ್ರಕಾಶ್ ನಾರಾಯಣ್, ಆದಿಮೂರ್ತಿ, ಮರಿಯಪ್ಪ, ನಟರಾಜ್, ಧರ್ಮದರ್ಶಿ ಕೆ.ಎಂ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
Follow Chikkaballapur District News
Facebook: https://www.facebook.com/hicbpur
Twitter: https://twitter.com/hicbpur