Ganjigunte, Sidlaghatta : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು (Husband) ಹೆಂಡತಿಯೇ (Wife) ಪ್ರಿಯಕರನೊಂದಿಗೆ ಸೇರಿ ಕೊಲೆ (Murder) ಮಾಡಿದ್ದ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಘಟನೆ ನಡೆದ ಏಳು ತಿಂಗಳ ನಂತರ ಇದೀಗ ಹೆಂಡತಿ ಹಾಗೂ ಪ್ರಿಯಕರ ಇಬ್ಬರೂ ಸಹ ಜೈಲು ಪಾಲಾಗಿದ್ದಾರೆ.
ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ಮೆಹರ್ ಹಾಗೂ ಆಕೆಯ ಪ್ರಿಯಕರ ಬುರುಡಗುಂಟೆಯ ತೌಸೀಫ್ ಬಂಧಿತ ಆರೋಪಿಗಳು.
ಈ ಇಬ್ಬರೂ ಸೇರಿ ಮೆಹರ್ ಳ ಗಂಡ ದಾದಾಪೀರ್ ನನ್ನು ಕಳೆದ ವರ್ಷ ನವೆಂಬರ್ 26 ರಂದು ಅವರ ಮನೆಯಲ್ಲಿಯೆ ಕೊಲೆ ಮಾಡಿದ್ದರು.
ಚಿಂತಾಮಣಿ ಉಪ ವಿಭಾಗದ ಎಎಸ್‍ಪಿ ಕುಶಲ್ ಚೌಕ್ಸೆ ಶಿಡ್ಲಘಟ್ಟದ ಸಿಪಿಐ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣ ಕುರಿತು ವಿವರಿಸಿದರು.
“ತಾಲ್ಲೂಕಿನ ಗಂಜಿಗುಂಟೆ ಗ್ರಾಮದ ದಾದಾಪೀರ್ ಹಾಗೂ ಮೆಹರ್ ದಂಪತಿಗೆ ಮದುವೆಯಾಗಿ ವರ್ಷಗಳು ಕಳೆದರು ಮಕ್ಕಳಾಗಿರಲಿಲ್ಲ. ಮೆಹರ್ ಅದೇ ಗ್ರಾಮದ ಪರಿಚಿತ ತೌಸೀಫ್‍ನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಮೆಹರ್ ಳ ಗಂಡ ದಾದಾಪೀರ್ ಹಾಗೂ ಕುಟುಂಬದವರಿಗೆ ತಿಳಿದಿದ್ದು ಪಂಚಾಯಿತಿ ಮಾಡಿ ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ. ಆದರೂ ಇಬ್ಬರ ನಡುವೆ ಕದ್ದುಮುಚ್ಚಿ ಅಕ್ರಮ ಸಂಬಂಧ ಮುಂದುವರೆದಿತ್ತು.
ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ದಾದಾಪೀರ್ ನನ್ನು ಮುಗಿಸಲು ಇಬ್ಬರೂ ಸೇರಿ ಸಂಚು ರೂಪಿಸಿದ್ದಾರೆ. ಒಂದಷ್ಟು ಮಾತ್ರೆಗಳನ್ನು ಪುಡಿ ಮಾಡಿ ಹಾಲಿನಲ್ಲಿ ಹಾಕಿದ ಮೆಹರ್ ಅದನ್ನು ಗಂಡ ದಾದಾಪೀರ್ ಗೆ ಕೊಟ್ಟಿದ್ದಾಳೆ. ಹಾಲು ಕುಡಿದ ದಾದಾಪೀರ್ ಮೃತಪಟ್ಟಿಲ್ಲ, ಬದಲಿಗೆ ಪ್ರಜ್ಞಾಹೀನನಾಗಿದ್ದಾನೆ. ಉಸಿರಾಡುತ್ತಿದ್ದನ್ನು ಕಂಡ ಇಬ್ಬರೂ ತೌಸೀಫ್ ತಂದಿದ್ದ ಕೋಳಿ ಸುಡುವ ಗನ್‍ನಿಂದ ದಾದಾಪೀರ್ ನನ್ನು ಸುಟ್ಟಿದ್ದು, ಮೃತಪಟ್ಟ ಮೇಲೆ ಆ ಕೊಠಡಿಗೆ ಒಳಗಿನಿಂದ ಚಿಲಕ ಹಾಕಿ ದಾದಾಪೀರ್ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಂಬಿಸುವ ನಾಟಕವಾಡಿದ್ದಾರೆ.
ಮೃತ ದಾದಾಪೀರ ಸಹೋದರಿ ರೇಷ್ಮತಾಜ್ ನೀಡಿದ ದೂರನ್ನು ದಾಖಲಿಸಿಕೊಂಡಿದ್ದ ದಿಬ್ಬೂರಹಳ್ಳಿ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿ, ಮೆಹರ ಮೊಬೈಲ್ ಕಾಲ್ ಡೀಟೈಲ್ಸ್ ಇನ್ನಿತರೆ ತಾಂತ್ರಿಕ ವರದಿಗಳ ಆಧಾರದಲ್ಲಿ ಖಚಿತ ಮಾಹಿತಿ ಮೇರೆಗೆ ಮೆಹರ್ ಹಾಗೂ ತೌಸೀಫ್‍ನನ್ನು ಬಂಧಿಸಿ ವಿಚಾರಿಸಿದಾಗ ಇಬ್ಬರೂ ತಪ್ಪೊಪ್ಪಿಕೊಂಡಿದ್ದಾರೆ” ಎಂದು ಎಎಸ್‍ಪಿ ಕುಶಲ್ ಚೌಕ್ಸೆ ವಿವರಿಸಿದರು.
ಸಿಪಿಐ ಧರ್ಮೇಗೌಡ, ದಿಬ್ಬೂರಹಳ್ಳಿ ಠಾಣೆಯ ಎಸ್‍ಐ ಟಿ.ಎಸ್.ಪಾಪಣ್ಣ ಹಾಜರಿದ್ದು ಪ್ರಕರಣವನ್ನು ಭೇದಿಸಲು ಶ್ರಮಿಸಿದ ಸಿಬ್ಬಂದಿ ನಂದಕುಮಾರ್, ಸುನಿತ, ಸುನಿಲ್‍ಕುಮಾರ್ ಅವರನ್ನು ಅಬಿನಂಧಿಸಿದರು.