Gauribidanur : ಗೌರಿಬಿದನೂರು ನಗರದಲ್ಲಿ ಮಂಗಳವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ತಾಲ್ಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಮಕ್ಕಳ ಹಕ್ಕು ಮತ್ತು ಸಂರಕ್ಷಣೆ ಹಾಗೂ ಕಾನೂನು ಕುರಿತ ಕಾರ್ಯಾಗಾರ (Child Rights and Protection workshop)ನಡೆಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ನಗರಸಭೆ ಆಯುಕ್ತೆ ಡಿ.ಎಂ.ಗೀತಾ “ಹೆಣ್ಣು ಮಕ್ಕಳ ಜನನವನ್ನು ಸಮಾಜದಲ್ಲಿ ಖುಷಿಯಿಂದ ಸಂಭ್ರಮಿಸಬೇಕು. ಆದರೆ ನಿರಂತರವಾಗಿ ಹೆಣ್ಣಿನ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ದೌರ್ಜನ್ಯವನ್ನು ತಡೆಗಟ್ಟಲು ಶಿಕ್ಷಣ ಆಯುಧವಾಗಬೇಕು. ಶಾಲಾ ಹಂತದಿಂದಲೇ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜತೆಗೆ ಹೆಣ್ಣು ಮಗುವಿನ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ. ಭ್ರೂಣ ಹತ್ಯೆ, ವರದಕ್ಷಿಣೆ, ಬಾಲ್ಯ ವಿವಾಹ, ಅತ್ಯಾಚಾರ, ಅಪ್ರಾಪ್ತ ಬಾಲಕಿಯರ ಮೇಲಿನ ದೌರ್ಜನ್ಯ, ಬಡತನ, ಅನಕ್ಷರತೆ, ಲಿಂಗ ತಾರತಮ್ಯ ಇನ್ನು ಅನೇಕ ಸಾಮಾಜಿಕ ಪಿಡುಗುಗಳಿಂದ ಹೆಣ್ಣು ಮಕ್ಕಳು ಬಳಲುತ್ತಿದ್ದಾಳೆ. ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸಿ ಸಮಾನತೆ ಕಾಣಬೇಕು” ಎಂದರು.
ಕಾರ್ಯಕ್ರಮದಲ್ಲಿ ಸಿಡಿಪಿಒ ರವಿಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಪ್ಪಗೌಡ ನಾಯ್ಕರ್, ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಅಂಜಿನಪ್ಪ, ನಿವೃತ್ತ ಜಿಲ್ಲಾ ನಿರೂಪಣಾಧಿ ಎಂ.ಜಿ.ಗೋಪಾಲ್, ಮಕ್ಕಳ ರಕ್ಷಣಾಧಿಕಾರಿ ಮಂಜುನಾಥ್.ಕೆ.ಎನ್, ರಾಮೇಗೌಡ, ವೆಂಕಟೇಶ್, ಆರೋಗ್ಯಾಧಿಕಾರಿ ಚಂದ್ರಮೋಹನ್, ಕಾರ್ಮಿಕ ನಿರೀಕ್ಷಕ ಸತೀಶ್ ಟಿ.ಬಿ, ರವಿಕುಮಾರ್ ಮತ್ತಿತ್ತರರು ಭಾಗವಹಿಸಿದ್ದರು.