Sidlaghatta : ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ವಿಶ್ವ ವಿದ್ಯಾಲಯ (GKVK) ಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಅನುಭವ ಕಾರ್ಯಕ್ರಮದಡಿ ಶಿಡ್ಲಘಟ್ಟದ ಬೋದಗೂರು ಗ್ರಾಮದಲ್ಲಿ ಬೀಡು ಬಿಟ್ಟಿದ್ದು ನಗರದಲ್ಲಿನ ರೇಷ್ಮೆಗೂಡು ಮಾರುಕಟ್ಟೆ (Governement Silk Cocoon Market), ರೈತ ಉತ್ಪಾದಕರ ಕಂಪನಿ (Farmer Producers Company), ಎಆರ್‌ಎಂ ರೀಲಿಂಗ್ ಯೂನಿಟ್ (ARM Silk Reeling Unit) ಮುಂತಾದ ರೇಷ್ಮೆಗೆ ಸಂಬಂಧಿಸಿದ ಸ್ಥಳಗಳಿಗೆ ಭೇಟಿ ನೀಡಿದರು.
ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೇಷ್ಮೆಗೂಡು ಹರಾಜು, ತೂಕ, ಹಣದ ಬಟವಾಡೆ ವ್ಯವಸ್ಥೆಯನ್ನು ವೀಕ್ಷಿಸಿದರು. ನಂತರ ಆಟೋ ಮೆಟಿಕ್ ರೀಲಿಂಗ್ ಯೂನಿಟ್ ಘಟಕಕ್ಕೆ ಭೇಟಿ ನೀಡಿ ಅಲ್ಲಿ ರೇಷ್ಮೆ ನೂಲು ಬಿಚ್ಚಾಣಿಕೆ ವಿಧಾನವನ್ನು ವೀಕ್ಷಿಸಿದರು.
ರೈತ ಉತ್ಪಾದಕರ ಕಂಪನಿಯ ಕಾರ‍್ಯವೈಖರಿ ಕುರಿತು ರೇಷ್ಮೆ ಕೃಷಿ ಸಹಾಯಕ ನಿರ್ದೆಶಕ ತಿಮ್ಮರಾಜು ಅವರು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕೃಷಿಯ ಉತ್ಪನ್ನಗಳಿಗೆ ಕೃಷಿಕರೆ ಬೆಲೆಯನ್ನು ನಿರ್ಧರಿಸಬೇಕು, ಉತ್ಪಾದಕರು ಹಾಗೂ ಗ್ರಾಹಕರ ನಡುವೆ ದಲ್ಲಾಳಿಗಳ ಇರಬಾರದು. ಪೂರ್ತಿ ಲಾಭ ಉತ್ಪಾದಕ ರೈತನಿಗೆ ಸೇರಬೇಕೆನ್ನುವ ಉದ್ದೇಶದಿಂದ ಈ ರೈತ ಉತ್ಪಾಕರ ಕಂಪನಿಯನ್ನು ರಚಿಸಿದ್ದು ಇಲ್ಲಿ ಎಲ್ಲವನ್ನೂ ರೈತರೆ ನಿರ್ಧರಿಸಲಿದ್ದಾರೆ. ಇಲಾಖೆಯ ಅಧಿಕಾರಿಗಳ ಹಿಡಿತ ಇರುವುದಿಲ್ಲ ಎಂದು ಉತ್ಪಾದಕರ ಕಂಪನಿಯಿಂದ ರೈತರಿಗೆ ಆಗುವ ಉಪಯೋಗಗಳ ಬಗ್ಗೆ ವಿವರಿಸಿದರು.
ಉತ್ಪಾದಕರ ಕಂಪನಿಯ ಸಿಇಒ ಜನಾರ್ಧನ್‌ಮೂರ್ತಿ, ಪ್ರಗತಿಪರ ರೈತ ಬೋದಗೂರು ನಾಗೇಶ್, ರೀಲಿಂಗ್ ಯೂನಿಟ್‌ನ ಮಾಲೀಕ ಮಧು, ವಿದ್ಯಾರ್ಥಿಗಳು ಹಾಜರಿದ್ದರು.