Jangamakote, Sidlaghatta : ಮಗುವಿನ ಸರ್ವಾಂಗೀಣ ಬೆಳವಣಿಗೆ ಮಾಡುವುದೇ ನಿಜವಾದ ಶಿಕ್ಷಣ. ಮಗುವಿನ ಸುಪ್ತ ಪ್ರತಿಭೆಯನ್ನು ಹೊರತೆಗೆದು ಅದನ್ನು ಪೋಷಿಸುವುದೇ ಶಿಕ್ಷಣದ ಉದ್ದೇಶವಾಗಬೇಕು ಎಂದು ಶಿಕ್ಷಣ ತಜ್ಞ ಎಚ್.ಚಂದ್ರಶೇಖರ್ ತಿಳಿಸಿದರು.
ತಾಲ್ಲೂಕಿನ ಜಂಗಮಕೋಟೆ ಕ್ರಾಸ್ ನಲ್ಲಿರುವ ಜ್ಞಾನಜ್ಯೋತಿ ಶಾಲೆ ಮತ್ತು ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ದಿ.ಬಿ.ಎಂ.ಮೂರ್ತಿ ಸ್ಮರಣಾರ್ಥ ಜ್ಞಾನ ಆವಿಷ್ಕಾರ್ 2023 ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದುಕನ್ನು ಬದಲಿಸುವ ಶಕ್ತಿ ಇರುವುದು ಶಿಕ್ಷಣಕ್ಕೆ ಮಾತ್ರ. ಮಕ್ಕಳು ಚಟುವಟಿಕೆ ಆಧಾರಿತ ಶಿಕ್ಷಣವನ್ನು ಪಡೆಯಬೇಕು. ಪ್ರಶ್ನಿಸುವ, ಚಿಂತಿಸುವ, ಬದುಕಿನ ಸಾಧ್ಯತೆಗಲನ್ನು ತೆರೆದು ನೋಡುವ ಗುಣಗಳನ್ನು ಚಿಕ್ಕ ವಯಸ್ಸಿನಿಂದಲೇ ರೂಢಿಸಬೇಕು. ಸಂಸ್ಕಾರ, ಸಂಸ್ಕೃತಿ, ಮೌಲ್ಯ, ನೈತಿಕತೆ ಸೇರಿದಾಗ ಮಾತ್ರ ಗುಣಮಟ್ಟದ ಶಿಕ್ಷಣವಾಗುತ್ತದೆ ಎಂದು ಹೇಳಿದರು.
ಶಾಲಾ ಕಾಲೇಜಿನ ವಾರ್ಷಿಕ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿ.ಎಂ.ರಾಜೀವ್ ಕುಮಾರ್, ಪ್ರಾಂಶುಪಾಲೆ ಡಾ.ಮನುಶ್ರೀ, ಓಂಶ್ರೀನಿಕೇತನ ಟ್ರಸ್ಟ್ ಅಧ್ಯಕ್ಷ ಎಂ.ಪುಟ್ಟೇಗೌಡ, ವಿ.ವೆಂಕಟಸುಬ್ಬಾರಾವ್, ಗ್ರಾಮೀಣ ವಿದ್ಯಾಭಿವೃದ್ಧಿ ಸಂಸ್ಥೆಯ ಕೃಷ್ಣಮೂರ್ತಿ, ಜೀರ್ಜಿಂಬೆ ವರ್ಣಂ ನಾರಾಯಣಸ್ವಾಮಿ, ಡಾ.ಅಲ್ಕಾ, ಮಂಜುನಾಥ್, ಲಕ್ಷ್ಮೀ ವಾಸುದೇವ್ ಹಾಜರಿದ್ದರು.