Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯ ಸರ್ಕಾರಿ ಪದವಿ ಕಾಲೇಜುಗಳ (Government Degree College) ಅತಿಥಿ ಉಪನ್ಯಾಸಕರು (Guest Lecturers) ಮಂಗಳವಾರ ಚಿಕ್ಕಬಳ್ಳಾಪುರ ನಗರದಲ್ಲಿ ಉದ್ಯೋಗ ಖಾಯಂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಸರ್ಕಾರಿ ಪದವಿ ಕಾಲೇಜಿನ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿಯವರೆ (DC Office) ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಅತಿಥಿ ಉಪನ್ಯಾಸಕರಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಕರ್ನಾಟಕ ನಾಗರಿಕ ಸೇವೆ ನಿಯಮಗಳ ಅಡಿಯಲ್ಲಿ ಸೇವೆಯನ್ನು ವಿಲೀನಗೊಳಿಸಬೇಕು. ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಧಿಸೂಚನೆಯನ್ನು ಈ ಪ್ರಕ್ರಿಯೆ ಮುಗಿಯುವವರೆಗೂ ತಡೆಹಿಡಿಯಬೇಕು ಎಂದು ಉಪನ್ಯಾಸಕ ನರಸಿಂಹಮೂರ್ತಿ ತಿಳಿಸಿದರು.
ಹಲವು ವರ್ಷಗಳಿಂದ ಕರ್ನಾಟಕದ ಒಟ್ಟು 438 ಸರ್ಕಾರಿ ಪದವಿ ಕಾಲೇಜುಗಳಲ್ಲಿ 14,500 ಅತಿಥಿ ಉಪನ್ಯಾಸಕರು ಕಡಿಮೆ ವೇತನಕ್ಕೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಖಾಯಂಗೊಳಿಸಬೇಕು ಎಂದು ಸರ್ಕಾರಕ್ಕೆ ಮನವಿ ನೀಡಿದ್ದರೂ ಯಾವುದೇ ಪ್ರಯೋಜನೆಯಾಗಿಲ್ಲ. ಆದ್ದರಿಂದ ಡಿಸೆಂಬರ್ 10ರಿಂದ ಪ್ರಾರಂಭವಾಗಿರುವ ತರಗತಿಗಳನ್ನು ಬಹಿಷ್ಕರಿಸಿದ್ದೇವೆ ಎಂದು ಅತಿಥಿ ಉಪನ್ಯಾಸಕ ಎಂ.ಮುನಿರಾಜು ಹೇಳಿದರು.
ಪ್ರಭು, ರಘುನಾಥ, ರಾಮಚಂದ್ರ, ರವೀಂದ್ರ, ಹರ್ಷನ್, ಗಿರಿಜಾ, ಕೃಷ್ಣಮೂರ್ತಿ, ಅಜಿತ್‌ಕುಮಾರ್, ಮೊಹಮ್ಮದ್ ಸಕೀಬ್, ಎನ್. ನರಸಿಂಹಮೂರ್ತಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದರು.