Gowdanahalli, Sidlaghatta : ಶಾಲೆ ಮತ್ತು ಆಸ್ಪತ್ರೆ ಚೆನ್ನಾಗಿರಬೇಕು. ಸಮುದಾಯದ ಸಹಭಾಗಿತ್ವದಲ್ಲಿ ಗ್ರಾಮೀಣಾಭಿವೃದ್ಧಿ ಸಾಧ್ಯ. ನೊಂದವರಿಗೆ ದನಿಯಾಗುವುದೇ ಮಾನವೀಯತೆ. ಈ ಭಾವನೆ ಎಲ್ಲರಲ್ಲೂ ಮೂಡಿದಾಗ ಕ್ಷೇತ್ರದ ಬೆಳವಣಿಗೆ ಸಾಧ್ಯ ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ಶಿಡ್ಲಘಟ್ಟ ತಾಲ್ಲೂಕಿನ ಗೌಡನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶುಕ್ರವಾರ ಎಸ್.ಎನ್.ಕ್ರಿಯಾ ಟ್ರಸ್ಟ್ ಹಾಗೂ ಇತರೆ ದಾನಿಗಳಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ ಹಾಗೂ ಕುಡಿಯುವ ನೀರಿನ ಬಾಟಲಿಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯೆಡೆಗೆ ತಾತ್ಸಾರ ಇರಬಾರದು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳನ್ನು ಚೆನ್ನಾಗಿ ಅಭಿವೃದ್ಧಿ ಮಾಡುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಮಾಡಬೇಕು. ಸರ್ಕಾರ ನೀಡುವ ಸವಲತ್ತುಗಳ ಜೊತೆಯಲ್ಲಿ ಗ್ರಾಮಸ್ಥರು, ಹಳೆಯ ವಿದ್ಯಾರ್ಥಿಗಳು, ಪೋಷಕರು, ಸಮಾಜ ಸೇವಕರು, ದಾನಿಗಳು ಜೊತೆಗೂಡಿದಾಗ ಸರ್ಕಾರಿ ಶಾಲೆಗಳು ಉತ್ತಮವಾಗಿ ಮಕ್ಕಳ ಭವಿಷ್ಯ ಉಜ್ವಲವಾಗುತ್ತವೆ ಎಂದರು.
ಮಕ್ಕಳು ಚೆನ್ನಾಗಿ ಓದಿ, ಗುರುಗಳು, ಪೋಷಕರು, ಗ್ರಾಮ ಹಾಗೂ ತಾಲ್ಲೂಕು ಹೆಮ್ಮೆ ಪಡುವಂತೆ ಸಾಧನೆ ಮಾಡಬೇಕು. ಈಗಾಗಲೇ ಗೌಡನಹಳ್ಳಿ ಸರ್ಕಾರಿ ಶಾಲೆ ಬಸ್ ಹೊಂದುವ ಮೂಲಕ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುತ್ತಿದೆ. ಮಕ್ಕಳ ಸಂಕ್ಯ ಇನ್ನೂ ಹೆಚ್ಚಿದಲ್ಲಿ ಇನ್ನೊಂದು ಬಸ್ ನಮ್ಮ ಟ್ರಸ್ಟ್ ಮೂಲಕ ನೀಡುತ್ತೇನೆ. ಬಸ್ ಚಾಲಕರ ವಾರ್ಷಿಕ ವೇತನವನ್ನು ಭರಿಸುತ್ತೇನೆ ಎಂದು ಹೇಳಿದರು.
ಮುಖಂಡ ಮಂಜುನಾಥ್ ಮಾತನಾಡಿ, ಈಚೆಗೆ ಶಾಲೆಗೆ ಭೇಟಿ ನೀಡಿದ್ದ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಾಲೆಯನ್ನು ಮತು ಮಕ್ಕಳ ಪ್ರಗತಿಯನ್ನು ಪ್ರಶಂಸಿಸಿದ್ದರು. ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ದೇಶಪ್ರೇಮ, ತಂದೆತಾಯಿಯೆಡೆಗೆ ಗೌರವ, ಹಂಚಿತಿನ್ನುವ ಗುಣ ರೂಢಿಸಬೇಕು. ನಮ್ಮ ಊರು ನಮ್ಮ ಜನ ಎಂಬ ಭಾವನೆ ಬೇರೂರಿದಾಗ ಮುಂದಿನ ದಿನಗಳಲ್ಲಿ ಅವರು ಸಮಾಜಕ್ಕೆ ಋಣ ತೀರಿಸುವ ಪ್ರಯತ್ನ ಮಾಡುತ್ತಾರೆ ಎಂದು ಹೇಳಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ಹಾಗೂ ಗ್ರಾಮಸ್ಥರಾದ ಲಕ್ಷ್ಮೀನಾರಾಯಣ್ ಮತ್ತು ಚೌಡಪ್ಪ ಜೊತೆಗೂಡಿ ಎಲ್.ಕೆ.ಜಿ ಮಕ್ಕಳಿಗೆ ಸಮವಸ್ತ್ರ ಹಾಗೂ ಶೂಗಳು ಮತ್ತು ಶಾಲೆಯ 165 ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್ ನೀಡಿದರು.
ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮೀಪತಿ, ಮಾಜಿ ಅಧ್ಯಕ್ಷ ಜಿ.ಆರ್.ವೆಂಕಟರೆಡ್ಡಿ, ಗ್ರಾಮದ ಲಕ್ಷ್ಮೀನಾರಾಯಣ್, ಬೈರಾರೆಡ್ಡಿ, ರಘುನಾಥರೆಡ್ಡಿ, ಚೌಡಪ್ಪ, ಮುಖ್ಯ ಶಿಕ್ಷಕ ದೇವರಾಜ್, ಶಿಕ್ಷಕರಾದ ಮಂಜುನಾಥ, ಕೃಪಾ, ನಳಿನಾಕ್ಷಿ, ದಿವ್ಯಾ, ಗಾಯಿತ್ರಿ, ಚಾಲಕ ಮುನಿಕೃಷ್ಣಪ್ಪ ಹಾಜರಿದ್ದರು.