Taduru, Sidlaghatta : ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ ತಾದೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾದರಿ ಅಂಗನವಾಡಿ ಕೇಂದ್ರದ ಉದ್ಘಾಟನೆ, ವಿವೇಕ ಯೋಜನೆಯಡಿ ಸರ್ಕಾರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಶಾಸಕ ಬಿ.ಎನ್.ರವಿಕುಮಾರ್ ಅವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕ್ಷೇತ್ರದ ಜನತೆಗೆ ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಸಿಗುವಂತಾಗಬೇಕು. ನನ್ನ ಅಧಿಕಾರದ ಅವಧಿಯಲ್ಲಿ ಜನತೆಗೆ ಉತ್ತಮ ಶಿಕ್ಷಣ, ಆರೋಗ್ಯ ಸೌಲಭ್ಯಗಳನ್ನು ಕೊಡುವುದೇ ನನ್ನ ಗುರಿ ಎಂದು ಅವರು ತಿಳಿಸಿದರು..
ಶಿಡ್ಲಘಟ್ಟ ಕ್ಷೇತ್ರವು ಶಿಕ್ಷಣ, ಆರೋಗ್ಯ ಹಾಗೂ ಆರ್ಥಿಕವಾಗಿ ಸಾಕಷ್ಟು ಹಿಂದುಳಿದಿದೆ. ಈ ಹಿಂದೆ ಆಡಳಿತ ನಡೆಸಿದವರು ಈ ಕ್ಷೇತ್ರದ ಅಭಿವೃದ್ದಿಗೆ ಏನು ಮಾಡಿದರು ಎಂದು ನಾನು ಪ್ರಶ್ನಿಸುವುದಿಲ್ಲ. ಅದರಿಂದ ಉಪಯೋಗವೂ ಇಲ್ಲ. ನನ್ನ ಅವಧಿಯಲ್ಲಿ ಸರ್ಕಾರದ ಯಾವುದೇ ಯೋಜನೆಯಲ್ಲಾಗಲಿ ಭ್ರಷ್ಟಾಚಾರ, ಅಕ್ರಮ, ಕಳಪೆ ಕಾಮಗಾರಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದರು.
ಒಟ್ಟಾರೆ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ಪೂರ್ವ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆಯನ್ನು ಬಲಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬೆಂಬಲವಾಗಿ ಅಧಿಕಾರಿ ವರ್ಗ, ಎಲ್ಲ ಜನಪ್ರತಿನಿಗಳು, ಸಂಘ ಸಂಸ್ಥೆಗಳು ಹಾಗೂ ಕ್ಷೇತ್ರದ ಮತದಾರರು ಸಹಕರಿಸಬೇಕು. ಆಗ ಮಾತ್ರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಸಾಧ್ಯವಾಗಲಿದೆ ಎಂದು ಆಶಿಸಿದರು.
ಮಾದರಿ ಅಂಗನವಾಡಿ ಕೇಂದ್ರದಲ್ಲಿ ಐಸಿಡಿಎಸ್ ಯೋಜನೆಯಡಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ನೀಡುವ ಪೌಷ್ಟಿಕ ಆಹಾರ, ಹಸಿರು ತರಕಾರಿ, ಹಣ್ಣು, ಒಣ ಹಣ್ಣು, ಏಕದಳ, ದ್ವಿದಳ ಕಾಳುಗಳ ಪ್ರದರ್ಶನವನ್ನು ಶಾಸಕರು ವೀಕ್ಷಿಸಿದರು.
ಸರ್ಕಾರಿ ಶಾಲಾ ಮಕ್ಕಳಿಗೆ ಬ್ಯಾಗ್ ಗಳನ್ನು ಹಾಗೂ ಗ್ರಾಮದ ಮಹಿಳೆಯರಿಗೆ ಕುಡಿಯುವ ನೀರಿನ ಕ್ಯಾನ್ ಗಳನ್ನು ಉಚಿತವಾಗಿ ನೀಡಿದರು.
ತಾಲೂಕು ಪಂಚಾಯಿತಿ ಇಒ ಜಿ.ಮುನಿರಾಜ, ಸಿಡಿಪಿಒ ನವತಾಜ್, ಬಿಇಒ ನರೇಂದ್ರ ಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಂಕ್ ಮುನಿಯಪ್ಪ, ತನುಜಾರಘು, ಮುಖಂಡರಾದ ತಾದೂರು ರಘು, ನಾಗಮಂಗಲ ಶ್ರೀನಿವಾಸಗೌಡ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾರಾಯಣಸ್ವಾಮಿ, ಗೋಪಾಲ್, ಗ್ರಾ.ಪಂ.ಸದಸ್ಯರಾದ ಸುನಿತವೆಂಕಟೇಶ್, ಸರಸ್ವತಮ್ಮಮುನಿಕೃಷ್ಣ, ಪ್ರಭಾಕರ್, ಶಿವಶಂಕರ್, ಮುರಳಿ, ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ, ಕಾರ್ಯದರ್ಶಿ, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.