Varadanayakanahalli, Sidlaghatta : ತಮ್ಮ ಗ್ರಾಮದಲ್ಲಿ ಏನೇನು ಅಭಿವೃದ್ದಿ ಕಾರ್ಯಗಳು, ಮೂಲ ಸೌಕರ್ಯಗಳನ್ನು ಕಲ್ಪಿಸುವ ಕಾಮಗಾರಿಗಳು ನಡೆಯಬೇಕೆಂಬ ಕಲ್ಪನೆ ಗ್ರಾಮದ ಎಲ್ಲರಲ್ಲೂ ಇರಬೇಕು. ಆಗ ಮಾತ್ರ ಗ್ರಾಮಗಳು ಅಭಿವೃದ್ದಿ ಕಾಣಲು ಸಾಧ್ಯ ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಆಗಿರುವ ಗ್ರಾಮಗಳಲ್ಲಿನ ಅನುಮೋದಿತ ಕಾಮಗಾರಿಗಳ ಕ್ರಿಯಾ ಯೋಜನೆ ಪಟ್ಟಿಯಲ್ಲಿನ ಬದಲಾವಣೆ ಕಾಮಗಾರಿಗಳನ್ನು ಕೈಗೊಳ್ಳಲು ಶುಕ್ರವಾರ ವರದನಾಯಕನಹಳ್ಳಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು.
2018-19ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಯಡಿ ತಾಲ್ಲೂಕಿನ 9 ಗ್ರಾಮಗಳು ಆಯ್ಕೆ ಆಗಿದ್ದು ಕೆಲವೊಂದು ಕಾಮಗಾರಿಗಳನ್ನು ಆಗಲೆ ನಡೆಸಿದೆ. ಇನ್ನು ಉಳಿದ ಹಣದಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಸಿಗಬೇಕಿದೆ.
ತಾಲ್ಲೂಕಿನ ತಾಟಪರ್ತಿಯಲ್ಲಿ 38 ಲಕ್ಷ ಮತ್ತು ವರದನಾಯಕನಹಳ್ಳಿಯಲ್ಲಿ 31 ಲಕ್ಷ ಹಣ ಉಳಿಕೆಯಿದೆ. ಒಟ್ಟಾರೆ ಒಂಬತ್ತು ಗ್ರಾಮಗಳಿಂದ ಒಂದು ಕೋಟಿ ಮುವ್ವತ್ತು ಲಕ್ಷ ರೂ ಉಳಿದಿದೆ. ಇದನ್ನು ಗ್ರಾಮದ ಚರಂಡಿ ಮುಂತಾದ ನೈರ್ಮಲ್ಯದ ಹಾಗೂ ಮೂಲಭೂತ ಸೌಕರ್ಯ ಹೆಚ್ಚಿಸಿಕೊಳ್ಳಲು ಬಳಸಿಕೊಳ್ಳಿ. ಗುಣಮಟ್ಟದಲ್ಲಿ ರಾಜಿಯಾಗಬೇಡಿ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ ಭೇದ ಮರೆತು ಎಲ್ಲರೂ ಒಂದಾಗಿರಿ ಎಂದರು.
ಅದಕ್ಕಾಗಿ ಆ ಎಲ್ಲ ಗ್ರಾಮಗಳಲ್ಲೂ ಗ್ರಾಮ ಸಭೆಗಳನ್ನು ನಡೆಸಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ನಿರ್ಧರಿಸಲಾಗುತ್ತಿದೆ. ಗ್ರಾಮಸ್ಥರು ತಮ್ಮೂರಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಪ್ರಸ್ತಾಪಿಸಬೇಕಿದೆ ಎಂದು ಮನವಿ ಮಾಡಿದರು.
ಈ ವೇಳೆ ವರದನಾಯಕನಹಳ್ಳಿಯ ಗ್ರಾಮಸ್ಥರು ಗ್ರಾಮದಲ್ಲಿ ಕೈಗೊಳ್ಳಬೇಕಾದ ಹಾಗೂ ತುರ್ತು ಆಗಬೇಕಾದ ಕೆಲಸ ಕಾಮಗಾರಿಗಳ ಬಗ್ಗೆ ಪ್ರಸ್ತಾಪಿಸಿ ಮನವಿಯನ್ನು ಸಹ ಶಾಸಕರಿಗೆ ಸಲ್ಲಿಸಿದರು.
ಜಿ.ಪಂ ಮಾಜಿ ಸದಸ್ಯ ಬಂಕ್ ಮುನಿಯಪ್ಪ, ತಾದೂರು ರಘು, ಗ್ರಾ.ಪಂ ಅಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಉಪಾಧ್ಯಕ್ಷೆ ಮಂಜುಳಮ್ಮ, ಸದಸ್ಯರಾದ ಮುನಿರೆಡ್ಡಿ, ಆರ್.ಎ.ಉಮೇಶ್, ಚಂದ್ರೇಗೌಡ, ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ, ಪಿಡಿಒ ರಮಾಕಾಂತ್, ತಾದೂರು ರಘು ಹಾಜರಿದ್ದರು.