Chikkaballapur : ಚಿಕ್ಕಬಳ್ಳಾಪುರ ಲೋಕಸಭಾ (Lokasabha) ಕ್ಷೇತ್ರದ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಲು ವಸತಿ ಸಚಿವ ಬಿ.ಝೆಡ್. ಜಮೀರ್ ಅಹಮದ್ ಖಾನ್ (B Z Zameer Ahmed Khan) ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಪ್ರಮುಖ ಪದಾಧಿಕಾರಿಗಳ ಸಭೆ ನಡೆಯಿತ್ತು.
ಸಭೆಯಲ್ಲಿ ಯುವ ಮುಖಂಡ ರಕ್ಷಾ ರಾಮಯ್ಯ ಮತ್ತು ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿ ಬೆಂಬಲಿಗರ ಮಧ್ಯೆ ಜಟಾಪಟಿ ನಡೆಯಿತು. ಸಭೆಯ ಆರಂಭಕ್ಕೂ ಮೊದಲೇ ಕೆಪಿಯುವ ಕಾಂಗ್ರೆಸ್ ಕಾರ್ಯಕರ್ತರು, ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ರಕ್ಷಾ ರಾಮಯ್ಯ ಅವರ ಭಾವಚಿತ್ರವುಳ್ಳ ಭಿತ್ತಿಪತ್ರ ಹಿಡಿದು ಘೋಷಣೆ ಕೂಗುತ್ತ ಶಕ್ತಿ ಪ್ರದರ್ಶನ ನಡೆಸಿದರು. ಬಾಗೇಪಲ್ಲಿ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸೇರಿದಂತೆ ಕೆಲವರು ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು. ತಾವೂ ಟಿಕೆಟ್ ಆಕಾಂಕ್ಷಿ ಎಂದು ಮಾಜಿ ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಹೇಳಿದರು.
‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ವೀರಪ್ಪ ಮೊಯಿಲಿ, ರಕ್ಷಾ ರಾಮಯ್ಯ, ಎನ್.ಎಚ್. ಶಿವಶಂಕರ ರೆಡ್ಡಿ, ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಮುಖಂಡ ಕೆಂಚೇಗೌಡ ಅವರ ಹೆಸರುಗಳೊಂದಿಗೆ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು’ ಎಂದು ಅಭ್ಯರ್ಥಿ ಆಯ್ಕೆಗೆ ಉಸ್ತುವಾರಿಯಾಗಿರುವ ಬಿ.ಝೆಡ್. ಜಮೀರ್ ಅಹಮದ್ ಖಾನ್ ತಿಳಿಸಿದರು.