Chikkaballapur : ರಾಮಸಮುದ್ರ ಕೆರೆಯ ಹೊರ ಹರಿವಿನ ಮೂಲಕ ಚಿತ್ರಾವತಿ ನದಿಗೆ ಎಚ್.ಎನ್.ವ್ಯಾಲಿ ಸಂಸ್ಕರಿತ ನೀರು ಸೇರಿದೆ ಎಂದು ಈಚೆಗೆ ಹರಿದಾಡುತ್ತಿರುವ ವದಂತಿ ಕುರಿತು ಜಿಲ್ಲೆಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಸ್.ಆರ್.ರವೀಂದ್ರನಾಥ್ ಸ್ಪಷ್ಟನೆ ನೀಡಿದ್ದಾರೆ. H-N ವ್ಯಾಲಿ ಯೋಜನೆಯಡಿ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ ನೀರು ಮಳೆ ನೀರಿನ ಜತೆಗೆ ಪೆರೇಸಂದ್ರ ಬಳಿ ರಾಮಸಮುದ್ರ ಕೆರೆ ಹೊರ ಹರಿವಿನ ಮೂಲಕ ಚಿತ್ರಾವತಿ ನದಿಗೆ ಸೇರಿದೆ ಎಂಬುದು ಸಂಪೂರ್ಣ ನಿರಾಧಾರವಾಗಿದೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಾಪ್ತಿಯ 65 ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದ್ದು, ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿ (H-N ವ್ಯಾಲಿ) ತ್ಯಾಜ್ಯ ನೀರು ಸಂಸ್ಕರಣೆ ಘಟಕದಿಂದ ಎರಡು ಹಂತಗಳಲ್ಲಿ ಸಂಸ್ಕರಿಸಿ ನೀರು ಹರಿಸಲಾಗುತ್ತಿದೆ. ಈ ಯೋಜನೆ ಯಡಿ ಇದುವರೆಗೂ ಮೂರೂ ಜಿಲ್ಲೆಗಳ 65 ಕೆರೆಗಳ ಪೈಕಿ 62 ಕೆರೆಗಳಿಗೆ ನೀರು ಹರಿಸಲಾಗಿದೆ. ಈ ಯೋಜನೆಯಲ್ಲಿ ರಾಮಸಮುದ್ರ ಕೆರೆಯೂ ಸೇರಿದ್ದು, ಇದುವರೆಗೂ ಹೆಚ್ ಎನ್ ವ್ಯಾಲಿ ಯೋಜನೆಯ ನೀರು ಈ ಕೆರೆಗೆ ಹರಿಸಿರುವುದಿಲ್ಲ.ಆದ್ದರಿಂದ ಸಾರ್ವಜನಿಕರಲ್ಲಿ ಯಾವುದೇ ರೀತಿಯ ಆತಂಕ ಬೇಡ ಎಂದು ಅವರು ತಿಳಿಸಿದರು.
ಬಿ.ಡಬ್ಲೂಎಸ್.ಎಸ್.ಬಿ ರವರು H-N ವ್ಯಾಲಿ ಯೋಜನೆಯಡಿ ಎರಡು ಹಂತದಲ್ಲಿ ಸಂಸ್ಕರಿಸಿದ ನೀರು ನೀಡುತ್ತಿದ್ದು, ಈ ನೀರು ನಿರಂತರ ಹಾಗೂ ನಿಯಮಿತವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕುರಿತ ಎಲ್ಲ ಫಲಿತಾಂಶ ವರದಿ ಸರ್ಕಾರ ನಿಗದಿಪಡಿಸಿರುವ ಮಾನದಂಡ ಪರಿಮಿತಿಯಲ್ಲಿರುತ್ತವೆ.
ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಅಧಿಕ ಮಳೆಯಾಗಿದ್ದರಿಂದ ಕಂದವಾರ ಕೆರೆಯಿಂದ ಕ್ಲಸ್ಟರ್ 9ರಲ್ಲಿ ಬರುವ ರಾಮಸಮುದ್ರ ಕೆರೆಯೂ ಸೇರಿದಂತೆ ಎಲ್ಲ ಕೆರೆಗಳಿಗೂ ಎಚ್.ಎನ್ ವ್ಯಾಲಿ ಯೋಜನೆಯಡಿ ಬೆಂಗಳೂರಿನಿಂದ ನೀರು ಹರಿಸುವುದನ್ನು ಕಳೆದ ಅಕ್ಟೋಬರ್ ತಿಂಗಳಿನಲ್ಲಿಯೇ ನಿಲ್ಲಿಸಲಾಗಿತ್ತು. ಆದ್ದರಿಂದ ಎಚ್-ಎನ್ ವ್ಯಾಲಿ ಯೋಜನೆಯಿಂದ ರಾಮಸಮುದ್ರ ಕೆರೆ ಮತ್ತು ಆ ಮೂಲಕ ಚಿತ್ರಾವತಿ ನದಿಗೆ ಈವರೆಗೆ H-N ವ್ಯಾಲಿ ನೀರು ಹರಿದಿರುವುದಿಲ್ಲ ಎಂದು ಎಸ್.ಆರ್.ರವೀಂದ್ರನಾಥ್ ಪ್ರಕಟಣೆಯಲ್ಲಿ ತಿಳಿಸಿದರು.