Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ JDS ಕಾರ್ಯಕರ್ತರು ಗುರುವಾರ ರಾಜ್ಯ BJP ಸರ್ಕಾರ ದುರಾಡಳಿತ ನಡೆಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾ ರ‍್ಯಾಲಿ (Protest) ನಡೆಸಿದರು. ಎಂ.ಜಿ. ರಸ್ತೆಯ ಮರುಳುಸಿದ್ದೇಶ್ವರ ದೇಗುಲದ ಬಳಿ ಸಮಾವೇಶಗೊಂಡ ಮುಖಂಡರು ಮತ್ತು ಕಾರ್ಯಕರ್ತರು ಶಿಡ್ಲಘಟ್ಟ ವೃತ್ತದ ಮೂಲಕ ಉಪವಿಭಾಗಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ಶೇ 40 ಕಮಿಷನ್ ಸರ್ಕಾರಕ್ಕೆ, ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಪ್ರತಿಭಟನಾ ರ‍್ಯಾಲಿಯಲ್ಲಿ ಮಾತನಾಡಿ “ಕೆಟ್ಟದ್ದನ್ನು ನೋಡಬೇಕು, ಕೇಳಬೇಡ, ಮಾತನಾಡಬೇಡ ಎನ್ನುವ ಸ್ಥಿತಿ ಚಿಕ್ಕಬಳ್ಳಾಪುರದ ಅಧಿಕಾರಿಗಳ ವಲಯದಲ್ಲಿ ಇದ್ದು ಅಧಿಕಾರಿಗಳು ಒಬ್ಬರ ಆಣತಿಯ ಪ್ರಕಾರ ಕೆಲಸ ಮಾಡುತ್ತಾ ಪೊಲೀಸರು ಸುಳ್ಳು ಪ್ರಕರಣಗಳನ್ನು ದಾಖಲಿಸುವುದು, ರೌಡಿ ಪಟ್ಟಿಗೆ ಸೇರಿಸುವ ಕೆಲಸವಾಗುತ್ತಿದೆ. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್ ಅಭಿವೃದ್ಧಿ ಆಗಿದೆಯೇ ಹೊರತು ಗ್ರಾಮೀಣ ರಸ್ತೆಗಳು ಅಭಿವೃದ್ಧಿ ಕಂಡಿಲ್ಲ. ರೈತರಿಗೆ ಸರಿಯಾಗಿ ರಸಗೊಬ್ಬರ, ಆಲೂಗಡ್ಡೆ, ದ್ರಾಕ್ಷಿ ಬೆಳೆಗಳಿಗೆ ಬೆಲೆ ಇಲ್ಲದೇ ಬದುಕು ದುಃಸ್ಥಿತಿಗೆ ಸಿಲುಕಿರುವ ಸಮಯದಲ್ಲಿ ಚಿಕ್ಕಬಳ್ಳಾಪುರ ಉತ್ಸವ ಮಾಡುತ್ತಿದ್ದಾರೆ. ಪ್ರತಿ ಹಳ್ಳಿಹಳ್ಳಿಗೆ, ಮನೆ ಮನೆ ಬಾಗಿಲಿಗೆ ತೆರಳಿ ಮತಭಿಕ್ಷೆ ಬೇಡುತ್ತೇನೆ. ಐದು ವರ್ಷಗಳ ಕಾಲ ಜೆಡಿಎಸ್ ಆಡಳಿತಕ್ಕೆ ಅವಕಾಶ ಕೊಡಿ ಅಭಿವೃದ್ಧಿ ಏನು ಎಂದು ತೋರಿಸುತ್ತೇವೆ ಎಂದು ಕೋರುತ್ತೇನೆ” ಎಂದರು.
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಕೆ.ಎಂ. ಮುನೇಗೌಡ, ಕಾರ್ಯಾಧ್ಯಕ್ಷ ಕೆ.ಆರ್. ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ. ರಾಜಕಾಂತ್, ತಾಲ್ಲೂಕು ಘಟಕದ ಅಧ್ಯಕ್ಷ ಕೊಳವನಹಳ್ಳಿ ಮುನಿರಾಜು, ಮುಸ್ಟೂರು ಶ್ರೀಧರ್, ಬಾಲಕುಂಟಹಳ್ಳಿ ಮುನಿಯಪ್ಪ, ಜೆಡಿಎಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದರು.