Chintamani : ಚಿಂತಾಮಣಿ ತಾಲೂಕಿನ ಕೈವಾರದಲ್ಲಿ (Kaiwara) ಮೂರು ದಿನಗಳ ಕಾಲ ನಡೆದ ಗುರುಪೂಜಾ ಸಂಗೀತೋತ್ಸವಕ್ಕೆ (Gurupooja Sangeetotsava) ಮಂಗಳವಾರ ಬೆಳಗ್ಗೆ 6 ಗಂಟೆಗೆ ಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಂ ನೇತೃತ್ವದ ಸಂಕೀರ್ತನೆಯೊಂದಿಗೆ ಅದ್ದೂರಿ ತೆರೆಬಿದ್ದಿತು.
ಸೋಮವಾರ ರಾತ್ರಿ ಹಲವಾರು ಹರಿಕಥಾ ದಾಸರು ತಮ್ಮ ಹರಿಕಥೆಗಳನ್ನು ಪ್ರಸ್ತುತಪಡಿಸಿದರೆ, ಶಾಸ್ತ್ರೀಯ ಸಂಗೀತ, ಭರತನಾಟ್ಯ, ವೀಣಾವಾದನ, ನಾದಸ್ವರ, ಬುರ್ರಕಥೆ, ಭಜನಾ ಮುಂತಾದ ವಿವಿಧ ಕ್ಷೇತ್ರಗಳ ಕಲಾವಿದರು ಗುರುಗಳಿಗೆ ಗೌರವ ಸಲ್ಲಿಸಿದರು.
ಮಂಗಳವಾರ ಬೆಳಗ್ಗೆ ತಾತಯ್ಯನವರ ಉತ್ಸವಮೂರ್ತಿ ಹಾಗೂ ಪಾದುಕೆಗಳನ್ನು ಮಂಗಳಾದಿಗಳೊಂದಿಗೆ ಶಾಸ್ತ್ರೋಕ್ತ ಮೆರವಣಿಗೆ ಮೂಲಕ ಮೂಲ ಮಠಕ್ಕೆ ಕೊಂಡೊಯ್ಯಲಾಯಿತು.
ಮೂರ್ನಾಲ್ಕು ದಿನಗಳಿಂದ ಜನಜಂಗುಳಿಯಿಂದ ಕೂಡಿದ್ದ ಕೈವಾರ ಮಂಗಳವಾರ ಸ್ತಬ್ಧವಾಗಿದ್ದು, ರಸ್ತೆ ಸಂಚಾರ ವಿರಳವಾಗಿತ್ತು. ಸಂಗೀತೋತ್ಸವವು 72 ಗಂಟೆಗಳ ಕಾಲ ನಡೆಯಿತು, ಚೆನ್ನೈ, ದೆಹಲಿ, ಮುಂಬೈ ಮತ್ತು ಇತರ ಸ್ಥಳಗಳಿಂದ ಅನೇಕ ಕಲಾವಿದರು ಭಾಗವಹಿಸಿ ತಮ್ಮ ಸಂಗೀತವನ್ನು ಪ್ರದರ್ಶಿಸಿದರು.