Chikkaballapur : ಕೋಚಿಮುಲ್ ವಿಭಜನೆಯನ್ನು ಸ್ವಾಗತಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಮಂಗಳವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿಕ್ರಾಸ್‌ನ ಮೆಗಾ ಡೇರಿ ಬಳಿ ಸಂಭ್ರಮಾಚರಣೆ ನಡೆಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಕಾರ್ಯಕರ್ತರು, ಡೇರಿ ಅಧ್ಯಕ್ಷರು, ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪರವಾಗಿ ಘೋಷಣೆಗಳನ್ನು ಕೂಗಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು.
ಪ್ರತ್ಯೇಕ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಅಡ್ಡಿಪಡಿಸಿದ್ದು ಈಗ ಕೋಚಿಮುಲ್ ವಿಭಜನೆಗೊಂಡಿರುವುದು ಕಾಂಗ್ರೆಸ್ ಶಾಸಕರಿಗಾದ ಸೋಲು ಎಂದು ಬಿಜೆಪಿ ಮುಖಂಡರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆಯಾದಾಗಿನಿಂದ ಜಿಲ್ಲೆಯ ಹೈನುಗಾರಿಕೆಯ ಅಭಿವೃದಿಗಾಗಿ ಕೋಚಿಮುಲ್ ನ ವಿಭಜನೆಯ ಕೂಗು ಕೇಳಿ ಬರುತಿತ್ತು. ರಾಜಕೀಯ ಷಡ್ಯಂತ್ರದಿಂದ ಕೋಚಿಮುಲ್ ಹಾಗೂ ಡಿಸಿಸಿ ಬ್ಯಾಂಕ್ ನ ವಿಭಜನೆಗೆ ಕಾಂಗ್ರೆಸ್ ನಾಯಕರು ಅಡ್ಡಿ ಪಡಿಸಿದ್ದರು. ಈ ವಿಭಜನೆಯಿಂದ ಕಾಂಗ್ರೆಸ್ ನಾಯಕರಿಗೆ ಸೋಲಾಗಿದೆ. ವಿಭಜನೆಗೆ ಸಹಕರಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಯವರಿಗೆ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಅಭಿನಂದನೆಗಳು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಸುದ್ದಿಗಾರರಿಗೆ ತಿಳಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ” ಕಾಂಗ್ರೆಸ್ ನಾಯಕರ ವಿರೋಧವಿದ್ದರೂ ನಮ್ಮನಾಯಕರ ದಿಟ್ಟ ಹೋರಾಟದ ಕಾರಣದಿಂದ ಕೋಚಿಮುಲ್ ವಿಭಜನೆ ಆಗಿದೆ. ಈ ಭಾಗಕ್ಕೆ ಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಮಾಡಬೇಕು ಎನ್ನುವ ದೃಷ್ಟಿಯಿಂದ ಸಚಿವರು ವೈದ್ಯಕೀಯ ಶಿಕ್ಷಣ ಕಾಲೇಜು ತಂದರು. ನ.18ರಂದು ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರು ಜಿಲ್ಲೆಗೆ ಆಗಮಿಸುತಿದ್ದು, ಆ ಸಂದರ್ಭದಲ್ಲಿ ಜಿಲ್ಲೆಯ ರೈತರ ಪರವಾಗಿ ಅವರನ್ನುಸನ್ಮಾನಿಸಲಾಗುವುದು” ಎಂದು ಹೇಳಿದರು.
ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ” ಜಿಲ್ಲೆಯ ಅಭಿವೃದ್ಧಿ ವಿಚಾರಗಳಲ್ಲಿ ಪಕ್ಷ ರಾಜಕಾರಣವನ್ನು ತರಬಾರದು. ಎಲ್ಲರೂ ಒಗ್ಗೂಡಿ, ಅಭಿವೃದ್ಧಿಗಾಗಿ ಶ್ರಮಿಸಿ ರೈತರಿಗೆ ಒಳ್ಳೆಯ ದರ ಕೊಡೋಣ, ಇದರಿಂದ ರೈತರಿಗೆ ಯಾವುದೇ ಅನ್ಯಾಯ ಆಗುವುದಿಲ್ಲ ಇದರಲ್ಲಿ ಕ್ಷುಲ್ಲಕ ರಾಜಕಾರಣ ಬೇಡ ” ಎಂದು ತಿಳಿಸಿದರು.
ಕೋಚಿಮುಲ್ ವಿಭಜನೆಯಿಂದ ರೈತರಿಗೆ, ಹೈನುಗಾರರಿಗೆ ಅನುಕೂಲವಾಗಿ ಜಿಲ್ಲೆಯ ರೈತರಿಗೆ ಹಿತವನ್ನು ತರಲಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ ಹೇಳಿದರು.
ಬಿಜೆಪಿ ವಕ್ತಾರ ರಮೇಶ್ ಬಾಯರಿ, ಬಿಜೆಪಿ ಮುಖಂಡರಾದ ನಾರಾಯಣಸ್ವಾಮಿ, ಸತೀಶ್ ರೆಡ್ಡಿ, ರಾಮಣ್ಣ, ಬೈರೇಗೌಡ, ರಾಜಣ್ಣ, ಲಕ್ಷ್ಮಿನಾರಾಯಣ ಗುಪ್ತ, ಕಣಜೇನಹಳ್ಳಿ ಶ್ರೀನಿವಾಸ್ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.