Kolar : ಕೋಲಾರ ಮೀಸಲು ಕ್ಷೇತ್ರದಲ್ಲಿ (Kolar Lokasabha) ಗುರುವಾರ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಕೋಲಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿ ಅಕ್ರಂ ಪಾಷಾ ಅವರಿಗೆ ನಾಮಪತ್ರ (Nomination) ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಕೋಲಾರ ನಗರದ ಬಂಗಾರಪೇಟೆ ವೃತ್ತದಿಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivakumar) ನೇತೃತ್ವದಲ್ಲಿ ರೋಡ್ ಶೋ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ” ನಾನು ಹಾಗೂ ಮುಖ್ಯಮಂತ್ರಿ, ಕೆ.ಎಚ್.ಮುನಿಯಪ್ಪ ಜೊತೆ ಮಾತನಾಡಿ ಗೌತಮ್ ಅವರನ್ನು ಕಣಕ್ಕಿಳಿಸಿದ್ದೇವೆ, ಕೋಲಾರ ಜಿಲ್ಲೆಯ ಜನರು ಒಂದು ಕಾಲದಲ್ಲಿ ಚಿನ್ನ ಕೊಟ್ಟಿದ್ದೀರಿ. ಈಗ ತರಕಾರಿ, ಹಾಲು ಕೊಡುತ್ತಿದ್ದೀರಿ. ಈ ಬಾರಿ ನನ್ನ ಮನವಿ ಎಂದರೆ ನಮ್ಮ ಹೊಸ ಅಭ್ಯರ್ಥಿಯನ್ನು ಸಂಸದರನ್ನಾಗಿ ಆಯ್ಕೆ ಮಾಡಿ. ವಿಧಾನಸಭೆ ಚುನಾವಣೆಯಲ್ಲಿ ವೇಳೆ ನೀಡಿದ್ದ ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಾವು ಪೂರೈಸಿದ್ದು ಈ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಜಾರಿ ಮಾಡುತ್ತಿದ್ದೇವೆ. ಈಗಾಗಲೇ ₹ 15 ಸಾವಿರ ಕೋಟಿ ಖರ್ಚಾಗಿದೆ. ಕೆ.ಸಿ.ವ್ಯಾಲಿ ಮೂಲಕ ಅಂತರ್ಜಲ ಹೆಚ್ಚಿಸುವ ಕೆಲಸ ಮಾಡಿದ್ದೇವೆ” ಎಂದು ತಿಳಿಸಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ, ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್, ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕ ಕೊತ್ತೂರು ಮಂಜುನಾಥ್, ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ, ಶಿಡ್ಲಘಟ್ಟ ರಾಜೀವ್ ಗೌಡ, ಊರುಬಾಗಿಲು ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು.