Sidlaghatta : ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಯಾವುದೋ ಒಂದು ವರ್ಗ ಅಥವ ಪಕ್ಷಕ್ಕೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಜನರ ಒಳಿತಿಗಾಗಿ, ಅರ್ಥಪೂರ್ಣವಾಗಿ ಆಚರಿಸಲು ಸಹಕಾರ ನೀಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿ ಸೇರಿದಂತೆ ವಿವಿಧ ಮಹನೀಯರ ಜಯಂತಿಗಳನ್ನು ವಿಜೃಂಭಣೆಯಿಂದ ಮಾಡುವ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಿದಾಗ ಮಾತ್ರ ಜಯಂತಿ ಆಚರಣೆಗೆ ಗೌರವ ಬರುತ್ತದೆ. ಕ್ಷೇತ್ರದಾದ್ಯಂತ ಇರುವ ವಾಲ್ಮೀಕಿ ಸಮುದಾಯದ ಆರ್ಥಿಕ ಹಾಗು ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸಿ ಜಯಂತಿಯಂದು ಅವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದೇ ಆದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು.
ಸಮುದಾಯದ ಹಿರಿಯ ಮುಖಂಡ ಬಂಕ್ ಮುನಿಯಪ್ಪ ಮಾತನಾಡಿ, ಎಲ್ಲಾ ಸಮುದಾಯಗಳು ಸಮಾಜದಲ್ಲಿ ಸಾಮರಸ್ಯದಿಂದ ಬದುಕು ಕಟ್ಟಿಕೊಳ್ಳಬೇಕು. ಈ ನಿಟ್ಟಿನಲ್ಲಿ ರಾಮಾಯಣ ಗ್ರಂಥದ ಮೂಲಕ ಮಹರ್ಷಿ ವಾಲ್ಮೀಕಿಯವರು ನೀಡಿರುವ ಸಂದೇಶಗಳನ್ನು ಸಮಾಜಕ್ಕೆ ತಿಳಿಸುವಂತಹ ಕೆಲಸವಾಗಬೇಕು ಎಂದರು.
ತಹಶೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಈ ಹಿಂದಿನಂತೆ ಅರ್ಥಪೂರ್ಣವಾಗಿ ಆಚರಿಸಲು ತಾಲ್ಲೂಕು ಆಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ತಾಲ್ಲೂಕು ಪಂಚಾಯಿತಿ ಇಓ ಜಿ.ಮುನಿರಾಜ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಸಮುದಾಯದ ಹಿರಿಯ ಮುಖಂಡ ಎನ್.ಮುನಿಯಪ್ಪ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಸಮುದಾಯದ ಮುಖಂಡರಾದ ರಾಮಚಂದ್ರಪ್ಪ, ದ್ಯಾವಪ್ಪ, ಮುಗಿಲಡಿಪಿ ನಂಜಪ್ಪ, ರಾಜೇಂದ್ರ, ಶ್ರೀನಾಥ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗು ಸಮುದಾಯದ ಮುಖಂಡರು ಹಾಜರಿದ್ದರು.