Sidlaghatta : ಇಂದಿರಾಗಾಂಧಿ ಕಾಲದಲ್ಲಿ ಉಳುವವನಿಗೆ ಭೂಮಿ ಎಂದಿದ್ದ ಕಾಂಗ್ರೆಸ್ ಪಕ್ಷ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳ ಮೂಲಕ ರೈತರ ಜಮೀನುಗಳಿಗೆ ಬೇಲಿ ಹಾಕಿ ರೈತರಿಂದ ಜಮೀನನ್ನು ಕಸಿದುಕೊಳ್ಳುತ್ತಿದೆ ಎಂದು ಕೋಲಾರದ ಸಂಸದ ಎಸ್.ಮುನಿಸ್ವಾಮಿ ಆರೋಪಿಸಿದರು.
ನಗರದಲ್ಲಿನ ಮಯೂರ ವೃತ್ತದಲ್ಲಿನ ಬಿಜೆಪಿ ಸೇವಾಸೌಧ ಕಚೇರಿಯಲ್ಲಿ ತಲಕಾಯಲಬೆಟ್ಟದ ಆಸುಪಾಸಿನ ರೈತರ ಜಮೀನುಗಳಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬೇಲಿ ಹಾಕಿ ನೊಟೀಸ್ ಜಾರಿ ಮಾಡಿದ್ದು ಆ ರೈತರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷವು ರೈತರ ಹೆಸರಲ್ಲಿ ಅಧಿಕಾರಕ್ಕೆ ಬಂದಿದ್ದು ಅಧಿಕಾರಕ್ಕೆ ಬಂದ ಕೂಡಲೆ ರೈತರನ್ನು ಮರೆಯುತ್ತಿದೆ. ತಾತ ಅಪ್ಪನ ಕಾಲದಿಂದಲೂ ಉಳುಮೆ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡಿದ್ದ ಜಮೀನನ್ನು ಅರಣ್ಯ ಭೂಮಿಯ ಲೆಕ್ಕದಲ್ಲಿ ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಜಮೀನಿನಲ್ಲಿ ಬೆಳೆದ ಬೆಳೆಯನ್ನು ಕಟಾವು ಮಾಡಿಕೊಳ್ಳಲೂ ಬಿಡದೆ ಫಸಲು ಸಮೇತ ಬೇಲಿ ಹಾಕಿದ್ದೇ ಅಲ್ಲದೆ ಅವರಿಗೆ ನೊಟೀಸ್‌ನ್ನು ಸಹ ನೀಡಿದ್ದರಿಂದ ರೈತರು ಭೂಮಿಯನ್ನು ಕಳೆದುಕೊಳ್ಳುವ ಆತಂಕ ಇನ್ನೊಂದು ಕಡೆ ಕೇಸನ್ನು ಹಾಕಿಸಿಕೊಳ್ಳುವ ಭಯದಲ್ಲಿದ್ದಾರೆ.
ನಾವು ಎಂದಿಗೂ ರೈತರ ಒಂದೆ ಒಂದು ಇಂಚು ಭೂಮಿಯನ್ನು ಸಹ ಬಿಟ್ಟುಕೊಡಲು ನಾವು ಬಿಡುವುದಿಲ್ಲ. ಎಲ್ಲ ರೈತರನ್ನು ಸಂಘಟಿಸಿ ಹೋರಾಟವನ್ನು ರೂಪಿಸುತ್ತೇವೆ. ರೈತರ ಜಮೀನನ್ನು ರೈತರಿಗೆ ಉಳಿಸುತ್ತೇವೆ ಎಂದರು.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ರಾಜ್ಯದ ಹಲವು ಕಡೆ ಈ ಸಮಸ್ಯೆ ಇದೆ. ಎಲ್ಲ ರೈತರನ್ನು ಪಕ್ಷಾತೀತವಾಗಿ ಒಂದು ಕಡೆ ಸೇರಿಸಿ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ನಡೆಸಿ ಸರ್ಕಾರದ ಈ ರೈತರ ವಿರೋಧಿ ನೀತಿಯನ್ನು ಖಂಡಿಸಲಾಗುವುದು.
ರೈತರು ತಮ್ಮ ಜಮೀನನ್ನು ಉಳಿಸಿಕೊಳ್ಳಲು ಒಂದು ಕಡೆ ಸರ್ಕಾರದ ವಿರುದ್ದ ಹೋರಾಟ, ಇನ್ನೊಂದು ಕಡೆ ನ್ಯಾಯಾಲಯದಲ್ಲಿ ಕಾನೂನಿನ ಹೋರಾಟವನ್ನು ಮಾಡಲಿದ್ದೇವೆ. ಎಲ್ಲ ಖರ್ಚನ್ನು ನಾವೇ ಭರಿಸುತ್ತೇವೆ. ರೈತರಿಂದ ನಯಾ ಪೈಸೆಯನ್ನು ಖರ್ಚು ಮಾಡಿಸುವುದಿಲ್ಲ ಎಂದರು.
ಅನ್ಯಾಯಕ್ಕೆ ಒಳಗಾದ ಎಲ್ಲ ರೈತರು ನಮ್ಮೊಂದಿಗೆ ಕೈ ಜೋಡಿಸಿ, ರೈತರ ಜಮೀನನ್ನು ಕಸಿದುಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಕಲಿಸುವುದರೊಂದಿಗೆ ನಮ್ಮ ಭೂಮಿಯನ್ನು ನಾವು ಉಳಿಸಿಕೊಳ್ಳೋಣ ಎಂದರು.
ಮುಖಂಡ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಅರಣ್ಯ ಇಲಾಖೆಯವರು ಬೇಲಿ ಹಾಕಿರುವ ಮತ್ತು ವಶಕ್ಕೆ ಪಡೆದುಕೊಂಡ ಜಮೀನಿನ ರೈತರು ತಮ್ಮ ಜಮೀನಿನ ಪಹಣಿ ಇನ್ನಿತರೆ ಎಲ್ಲ ದಾಖಲೆಗಳ ಪ್ರತಿಯನ್ನು ಕೊಡಿ. ನ್ಯಾಯಾಲಯದಲ್ಲಿ ನಿಮ್ಮೆಲ್ಲರ ಪರವಾಗಿ ದಾವೆ ಹಾಕಿ ನಮ್ಮ ಜಮೀನನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡೋಣ, ಸತ್ಯಕ್ಕೆ ಜಯ ನಮ್ಮದಾಗಲಿದೆ ಎಂದರು.
ಮಾಜಿ ಶಾಸಕ ಎಂ.ರಾಜಣ್ಣ, ಮುಖಂಡರಾದ ಸೀಕಲ್ ರಾಮಚಂದ್ರಗೌಡ, ಆನಂದಗೌಡ, ಕನಕಪ್ರಸಾದ್, ಡಿ.ಎಸ್.ಎನ್.ರಾಜು, ನಟರಾಜ್ ಹಾಜರಿದ್ದರು.