Ganjigunte, Sidlaghatta : ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯವಂತ ಪರಿಸರ ನಿರ್ಮಾಣ ಮಾಡುವಲ್ಲಿ ಸಮುದಾಯ ನೆರವಾಗಬೇಕು. ವಿದ್ಯಾರ್ಥಿಗಳು ತಾಯಿ, ತಂದೆ ಮತ್ತು ಗುರುಗಳನ್ನು ಗೌರವಿಸಿದಾಗ ಜೀವನದಲ್ಲಿ ಅತ್ಯುನ್ನತ ಸ್ಥಾನ ಅಲಂಕರಿಸಲು ಸಾಧ್ಯ ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.
ತಾಲ್ಲೂಕಿನ ಗಂಜಿಗುಂಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಅಕ್ಷರದಾಸೋಹ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ಯೋಜನೆಯಡಿ 9 ಹಾಗೂ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಮೊಟ್ಟೆ, ಬಾಳೆಹಣ್ಣು ಹಾಗೂ ಶೇಂಗಾ ಚಿಕ್ಕಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರತಿಯೊಂದು ಮಗು ಸಹ ತಾಯಿ ತಂದೆಯಷ್ಟೇ ಶಿಕ್ಷಣ ಕಲಿಸಿದ ಗುರುವನ್ನು ಗೌರವಿಸಬೇಕು. ಈ ಮೂವರು ಪ್ರತಿಯೊಬ್ಬರ ಜೀವನದಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಮುಂಬರುವ ಸೆಪೆಂಬರ್ 5 ರ ಶಿಕ್ಷಕರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ.ನರೇಂದ್ರಕುಮಾರ್ ಮಾತನಾಡಿ, ಕ್ಷೇತ್ರದ ಪ್ರತಿಯೊಬ್ಬರಿಗೂ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ದೊರೆಯಬೇಕು ಎಂಬ ನಿಟ್ಟಿನಲ್ಲಿ ಆಲೋಚಿಸುವ ಶಾಸಕರು ದೊರೆತಿರುವುದು ಕ್ಷೇತ್ರದ ಜನತೆಯ ಸೌಭಾಗ್ಯ ಎಂದರು.
ಮಾಜಿ ಜಿ.ಪಂ ಸದಸ್ಯ ಹಾಗೂ ಜೆಡಿಎಸ್ ಹಿರಿಯ ಮುಖಂಡ ಬಂಕ್ ಮುನಿಯಪ್ಪ ಮಾತನಾಡಿ, ಈ ಹಿಂದೆ ಪ್ರಧಾನಮಂತ್ರಿ ಪೋಷಣ್ ಶಕ್ತಿ ಯೋಜನೆಯಡಿ 1 ರಿಂದ 8 ನೇ ತರಗತಿ ಮಕ್ಕಳಿಗೆ ಮಾತ್ರ ಮೊಟ್ಟೆ, ಬಾಳೆಹಣ್ಣು ಹಾಗೂ ಚಿಕ್ಕಿ ನೀಡುತ್ತಿದ್ದು ಇದರಿಂದ ಮಕ್ಕಳಲ್ಲಿ ತಾರತಮ್ಯ ಉಂಟಾಗುತ್ತಿತ್ತು. ಆದರೆ ಇದೀಗ ಎಲ್ಲರಿಗೂ ಸಿಗುವುದರಿಂದ ತಾರತಮ್ಯ ಹೋಗಲಾಡಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ತಾದೂರು ರಘು, ಪೂಲಕುಂಟ್ಲಹಳ್ಳಿ ರಘುನಾಥರೆಡ್ಡಿ, ಗಂಜಿಗುಂಟೆ ಗ್ರಾ.ಪಂ ಅಧ್ಯಕ್ಷ ನರಸಿಂಹಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ, ಶಿಕ್ಷಕರ ಸಂಘದ ಅಧ್ಯಕ್ಷ ಮುನಿರಾಜು ಹಾಜರಿದ್ದರು.