Chikkaballapur : ಚಿಕ್ಕಬಳ್ಳಾಪುರ ನಗರದ ಮುನಿಸಿಪಲ್ ಬಡಾವಣೆಯಲ್ಲಿ (Municipal Layout) ಸೋಮವಾರ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ರ ‘ನಮಸ್ತೆ ಚಿಕ್ಕಬಳ್ಳಾಪುರ’ (Namaste Chikkaballapur) ಕಾರ್ಯಕ್ರಮವನ್ನು ಹಮ್ಮಿಕೊಳ್ಳಾಲಾಗಿತ್ತು.
ಈ ಸಂದರ್ಭದಲ್ಲಿ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ಖಾಲಿ ನಿವೇಶನಗಳಲ್ಲಿ ಕಸ, ತ್ಯಾಜ್ಯ ತುಂಬಿ ಗಿಡಗಂಟಿಗಳು ಬೆಳೆದು ಹಾವು ಸೇರಿದಂತೆ ವಿಷ ಜಂತುಗಳ ಕಾಟಕ್ಕೆ ಕಾರಣವಾಗುತ್ತಿದೆ. ಇದು ನಿವಾಸಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದ್ದು, ಈ ನಿವೇಶನಗಳ ಮಾಲೀಕರಿಗೆ ನಿವೇಶನಗಳನ್ನು ಸ್ವಚ್ಛವಾಗಿಡುವಂತೆ ನೋಟಿಸ್‌ಗಳನ್ನು ನೀಡಲು ಸೂಚಿಸಲಾಗಿದೆ. ಹೆಚ್ಚುವರಿಯಾಗಿ, ಒಳಚರಂಡಿ ಸಮಸ್ಯೆಗಳು ಮತ್ತು ಬಡಾವಣೆಯಲ್ಲಿ ಬೀದಿ ದೀಪಗಳ ಅಗತ್ಯತೆಯಂತಹ ಮೂಲಸೌಕರ್ಯ ಸಮಸ್ಯೆಗಳಿದ್ದು, ಅದನ್ನು ಎರಡು ದಿನಗಳಲ್ಲಿ ಪರಿಹರಿಸಲಾಗುವುದು ಎಂದು ತಿಳಿಸಿದರು.
ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿಯನ್ನು ಒತ್ತಿ ಹೇಳಿದ ಶಾಸಕ ಪ್ರದೀಪ್ ಈಶ್ವರ್ ಮತ್ತು ಆ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಮಾಡಿದರು.
ಅಕ್ರಮ ಕ್ರಷರ್‌ಗಳ ವಿಚಾರವಾಗಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಇಂತಹ ಚಟುವಟಿಕೆಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳುವುದಾಗಿ ಹಾಗೂ ವಿಧಾನ ಸಭೆಯಲ್ಲೂ ಈ ಬಗ್ಗೆ ಪ್ರಸ್ತಾಪಿಸುವುದಾಗಿ ತಿಳಿಸಿದರು
ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಪಂಪಾಶ್ರೀ, ತಾಲೂಕು ಆರೋಗ್ಯಾಧಿಕಾರಿ ಡಾ.ಮಂಜುಳಾ, ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.