Sidlaghatta : ಶೀಘ್ರದಲ್ಲೆ ಬಿಪಿಎಲ್ ಕಾರ್ಡುಗಳಿಗೆ ಸಲ್ಲಿಸಿರುವ ಅರ್ಜಿಗಳನ್ನು ಇತ್ಯರ್ಥ ಪಡಿಸಿ ಕಾರ್ಡುಗಳನ್ನು ವಿತರಿಸುವ ಕೆಲಸ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಅವರಿಗೂ ಪಡಿತರ ಅಕ್ಕಿ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಶಿಡ್ಲಘಟ್ಟ ನಗರದಲ್ಲಿ ತನ್ನ ಶಾಲಾ ಕಾಲದ ಸ್ನೇಹಿತ ಸಕ್ರಪ್ಪ ಅವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಾಕಷ್ಟು ದಾಸ್ತಾನು ಇದ್ದರೂ ಸಹ ಕೇಂದ್ರ ಸರ್ಕಾರವು ನಮಗೆ ಅಕ್ಕಿಯನ್ನು ಕೊಡಲಿಲ್ಲ. ಆದರೂ ನಾವು ಮತದಾರರಿಗೆ ಕೊಟ್ಟ ಮಾತಿಗೆ ಬದ್ಧರಾಗಿದ್ದು ಅಕ್ಕಿ ಬದಲಿಗೆ ಹಣ ಕೊಡುತ್ತಿದ್ದೇವೆ. ಅಂಧ್ರ ತೆಲಂಗಾಣ ಸರ್ಕಾರಗಳೊಂದಿಗೆ ಮಾತನಾಡಿದ್ದು ಅಲ್ಲಿ ಅಕ್ಕಿ ಸಿಗುವ ಭರವಸೆ ಇದೆ ಎಂದರು.
ಅಕ್ಕಿ ದೊರೆತ ಮೇಲೆ ಅಕ್ಕಿಯನ್ನೆ ವಿತರಿಸುತ್ತೇವೆ. ಅದುವರೆಗೂ ಅಕ್ಕಿ ಬದಲಿಗೆ ತಲಾ 170 ರೂ.ನಂತೆ ಹಣವನ್ನು ಅವರ ಖಾತೆಗೆ ಜಮೆ ಮಾಡುತ್ತಿದ್ದೇವೆ. ಈಗಾಗಲೆ ಒಂದು ತಿಂಗಳ ಅಕ್ಕಿಯ ಹಣ ಜಮೆ ಮಾಡಿದ್ದು ಆಗಷ್ಟ್ ತಿಂಗಳ ಹಣ ಮುಂದಿನ ವಾರ ಅಥವಾ ಹತ್ತು ದಿನಗಳಲ್ಲಿ ಜಮೆ ಮಾಡಲಾಗುವುದು ಎಂದು ವಿವರಿಸಿದರು.
ಎಪಿಎಲ್ ಕಾರ್ಡುದಾರರಿಗೂ ನಾವು ತಲಾ 10 ಕೆಜಿ ಅಕ್ಕಿಯನ್ನು ನೀಡುತ್ತಿದ್ದು ಕೆಜಿಗೆ 15 ರೂ ನಂತೆ ಗ್ರಾಹಕ ನೀಡಲಿದ್ದು ಇನ್ನುಳಿದ ಹಣವನ್ನು ಸರ್ಕಾರ ಭರಿಸುತ್ತಿದೆ.
ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡಲಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾಗಾಂಧಿ, ರಾಹುಲ್ ಗಾಂಧಿ ಆಗಮಿಸುವ ನಿರೀಕ್ಷೆ ಇದೆ. ಆ ಮೂಲಕ ನಾಲ್ಕು ಗ್ಯಾರಂಟಿಗಳನ್ನು ಜಾರಿ ಮಾಡಿದಂತಾಗುತ್ತದೆ.
ಇನ್ನು ಉದ್ಯೋಗ ನಿಧಿ ಗ್ಯಾರಂಟಿಯನ್ನು ಮಾತ್ರ ಜಾರಿ ಮಾಡುವುದು ಬಾಕಿ ಇದ್ದು ಅದನ್ನೂ ಸಹ ಡಿಸೆಂಬರ್‌ನಲ್ಲಿ ಮಾಡಲು ತಯಾರಿಗಳು ನಡೆದಿವೆ. ಅಂಕಿ ಅಂಶಗಳ ಸಂಗ್ರಹ ನಂತರ ಜಾರಿ ಮಾಡಲಾಗುವುದು ಎಂದರು.
ಯಾವ ಯೋಜನೆಗೂ ಯಾವುದೆ ಅಡ್ಡಿ ಆತಂಕ ಇಲ್ಲ. ಹಣದ ಕೊರತೆಯೂ ಇಲ್ಲ. ನಮ್ಮ ರಾಜ್ಯ ಕಾಂಗ್ರೆಸ್ ಸರ್ಕಾರದ ಮೊದಲ ಕ್ಯಾಬಿನೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದಂತೆ ಎಲ್ಲ ಐದೂ ಗ್ಯಾರಂಟಿಗಳನ್ನು ನಾವು ತಪ್ಪದೆ ಜಾರಿ ಮಾಡುತ್ತೇವೆ ಎಂದು ವಿವರಿಸಿದರು.