Chikkaballapur : ಚಿಕ್ಕಬಳ್ಳಾಪುರ ನಗರದಲ್ಲಿ ಶಿಡ್ಲಘಟ್ಟ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೇಲ್ಸೇತುವೆ ನಿರ್ಮಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚನೆ ನೀಡಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಸಿ. ಸುಧಾಕರ್ (MC Sudhakar) ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಇಲಾಖೆಯವರು ಈ ಭಾಗವನ್ನು ತಮ್ಮ ಜಾಗವೆಂದು ಅಳತೆ ಮಾಡಿ ಕಲ್ಲು ನೆಟ್ಟಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ರೈಲ್ವೆ ಜಾಗದ ಗೊಂದಲ – ಮೇಲ್ಸೇತುವೆ ಪರಿಹಾರ?
ಸಚಿವರು, “1917ರಲ್ಲಿ ಈ ಜಾಗ ರೈಲ್ವೆಗೆ ಸೇರಿದೆ ಎನ್ನಲಾಗುತ್ತಿದ್ದು, ದಾಖಲೆಗಳಲ್ಲಿ ಸ್ಪಷ್ಟತೆ ಇಲ್ಲ. ರಸ್ತೆಗೆ ಅವಕಾಶವಿಲ್ಲದ ಸ್ಥಿತಿಯಲ್ಲಿ ಮೇಲ್ಸೇತುವೆಯೇ ಏಕೈಕ ಪರಿಹಾರ” ಎಂದರು. ರೈಲ್ವೆ ಇಲಾಖೆ ತಮ್ಮ ಹಕ್ಕಿನ ಜಾಗವೆಂದು ಕಲ್ಲು ನೆಟ್ಟು ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸುತ್ತಿರುವುದರಿಂದ ರಸ್ತೆ ನಿರ್ಮಾಣ ಅಸಾಧ್ಯವಾಗಿದೆ ಎಂದು ಹೇಳಿದರು.
ಸಮಾಜ ಒಡೆಯುವ ಕೆಲಸ ತಪ್ಪು
ಗೌರಿಬಿದನೂರು ಪುತ್ಥಳಿ ಗಲಾಟೆ ಕುರಿತು ಮಾತನಾಡಿದ ಅವರು, “ಅಂಬೇಡ್ಕರ್ ಅಥವಾ ವಾಲ್ಮೀಕಿ ಸೇರಿದಂತೆ ಯಾವ ಮಹನೀಯರನ್ನು ವೈಯಕ್ತಿಕ ಪ್ರತಿಷ್ಠೆಯಾಗಿ ಬಳಸಬಾರದು. ಯಾರೂ ಸಮಾಜದಲ್ಲಿ ಶಾಂತಿ ಭಂಗ ಮಾಡುವ ರೀತಿಯಲ್ಲಿ ನಡೆಕೊಳ್ಳಬಾರದು” ಎಂದು ಹೇಳಿದರು. ಗುಡಿಬಂಡೆ ಪ್ರಕರಣಕ್ಕೂ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಂಗಮಕೋಟೆ ಕೈಗಾರಿಕೀಕರಣ: ರೈತರ ಅಭಿಪ್ರಾಯ ಸಂಗ್ರಹ
ಜಂಗಮಕೋಟೆ ಹೋಬಳಿಯಲ್ಲಿ ಕೈಗಾರಿಕೀಕರಣದ ಕುರಿತು ರೈತರ ಅಭಿಪ್ರಾಯ ಪಾರದರ್ಶಕವಾಗಿ ಸಂಗ್ರಹಿಸಲಾಗಿದೆ ಎಂದು ಸಚಿವರು ಹೇಳಿದರು. “ಇದು ಜಿಲ್ಲಾಡಳಿತದ ಪ್ರಕ್ರಿಯೆ. ಕೆಐಎಡಿಬಿ ಸಹಕಾರ ನೀಡಿದರೂ ಅವರ ನಿರ್ಧಾರವಲ್ಲ. ರೈತರ ಅಭಿಪ್ರಾಯವೇ ಮೊದಲ ಆದ್ಯತೆ,” ಎಂದರು.
ಶಿಕ್ಷಕರಿಗೆ ಬದ್ಧತೆಯ ಅಗತ್ಯ
ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿತದ ಕುರಿತು ಮಾತನಾಡಿದ ಸಚಿವರು, “ಶಿಕ್ಷಕರು ತಮ್ಮ ಕರ್ತವ್ಯವನ್ನು ಬದ್ಧತೆಯಿಂದ ನಿರ್ವಹಿಸಬೇಕು. ಅಧಿಕಾರಿಗಳು ಮತ್ತು ಶಾಲಾ ಆಡಳಿತ ಜವಾಬ್ದಾರಿ ತೆಗೆದುಕೊಳ್ಳಬೇಕು. ಜಿಲ್ಲಾವಾರು ವಿಶ್ಲೇಷಣೆ ನಡೆಸಿ ಬದಲಾವಣೆ ಮಾಡಲಾಗುವುದು” ಎಂದು ಹೇಳಿದರು.
ಎನ್‌ಎಚ್ 69: ₹3000 ಕೋಟಿ ವೆಚ್ಚದ ಚತುಷ್ಪಥ ಯೋಜನೆ
ರಾಷ್ಟ್ರೀಯ ಹೆದ್ದಾರಿ 69 ಅನ್ನು ಚತುಷ್ಪಥ ರಸ್ತೆಯನ್ನಾಗಿ ರೂಪಿಸುವ ಯೋಜನೆಯ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಸಲಾಯಿತು. ಈ ಹೆದ್ದಾರಿ ಗೌರಿಬಿದನೂರು, ಚಿಕ್ಕಬಳ್ಳಾಪುರ ಹಾಗೂ ಶಿಡ್ಲಘಟ್ಟ ತಾಲ್ಲೂಕುಗಳ ಮೂಲಕ ಹಾದು ಹೋಗಲಿದ್ದು, ಬೈಪಾಸ್ ರಸ್ತೆ ನಿರ್ಮಾಣ ಅಗತ್ಯವಾಗಿದೆ. ₹3000 ಕೋಟಿ ವೆಚ್ಚದ ಈ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, ಜಿಪಂ ಸಿಇಒ ಪ್ರಕಾಶ್ ನಿಟ್ಟಾಲಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಅಶ್ವಿನ್, ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಮಲ್ಲಿಕಾರ್ಜುನ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.