Chikkaballapur : ಚಿಕ್ಕಬಳ್ಳಾಪುರ ಮಕರ ಸಂಕ್ರಾಂತಿ (Sankranti) ಹಬ್ಬವನ್ನು ಜಿಲ್ಲೆಯಾದ್ಯಂತ ಮಂಗಳವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಹೈನುಗಾರರು ‘ಸುಗ್ಗಿಯ ಹಬ್ಬ’ದ ಪ್ರಯುಕ್ತ ರಾಸುಗಳನ್ನು ಬಗೆ ಬಗೆಯಲ್ಲಿ ಶೃಂಗರಿಸಿ, ಮೆರವಣಿಗೆ ನಡೆಸಿ ಸಂಜೆ ವೇಳೆ ಕಿಚ್ಚು ಹಾಯಿಸಿ ಸಂಭ್ರಮಪಟ್ಟರು.
ಚಿಕ್ಕಬಳ್ಳಾಪುರ ಬಜಾರ್ ರಸ್ತೆಯ ಕೋದಂಡರಾಮ ದೇವಸ್ಥಾನ, ಬಾಲಾಜಿ ಚಿತ್ರಮಂದಿರ ಹಿಂಭಾಗದ ರಸ್ತೆಯ ಪ್ರಸಾದ ಗಣಪತಿ ಮಂದಿರ, ಕೋಟೆ ಕಾಳಿ ದೇವಸ್ಥಾನ, ರಂಗಸ್ಥಳದ ರಂಗನಾಥ ದೇವಾಲಯ, ಎಂ.ಜಿ.ರಸ್ತೆಯ ಮರಳು ಸಿದ್ದೇಶ್ವರ, ಕಂದವಾರಪಟೆಯ ಲಕ್ಷ್ಮಿವೆಂಕಟರಮಣ ದೇವಾಲಯದ ಸೇರಿದಂತೆ ಹಲವಾರು ದೇವಾಲಯಗಳಲ್ಲಿ ಹಬ್ಬದ ಪ್ರಯುಕ್ತ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಚಿಕ್ಕಬಳ್ಳಾಪುರದ ಗಂಗನಮಿದ್ದೆಯಲ್ಲಿ ಸಂಕ್ರಾಂತಿ ಅಂಗವಾಗಿ ಸಂಜೆ ರಾಸುಗಳಿಗೆ ಕಿಚ್ಚು ಹಾಯಿಸಲಾಯಿತು.
ಈಶಾ ಯೋಗ ಕೇಂದ್ರ :
ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಬಳಿಯ ಈಶಾ ಯೋಗ ಕೇಂದ್ರದಲ್ಲಿ ಮಕರ ಸಂಕ್ರಾಂತಿಯ ದಿನವಾದ ಮಂಗಳವಾರ 54 ಅಡಿ ಎತ್ತರದ ಮಹಾಶೂಲವನ್ನು (ತ್ರಿಶೂಲ) ಸದ್ಗುರು ಜಗ್ಗಿ ವಾಸುದೇವ್ ಅವರು ಅನಾವರಣಗೊಳಿಸಿದರು.
ಚಿಂತಾಮಣಿ :
ಕೈವಾರದಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಪ್ರಯುಕ್ತ ಯೋಗಿನಾರೇಯಣ ಮಠ, ಅಮರನಾರೇಯಣ ದೇವಾಲಯ, ಭೀಮಲಿಂಗೇಶ್ವರ ದೇವಾಲಯಗಳಲ್ಲಿ ಅಲಂಕಾರ, ಪೂಜೆ ಮತ್ತು ಮಠದ ಗೋಶಾಲೆಯಲ್ಲಿ ಗೋಪೂಜೆ ಹಮ್ಮಿಕೊಳ್ಳಲಾಗಿತ್ತು.
ಶಿಡ್ಲಘಟ್ಟ:
ಶಿಡ್ಲಘಟ್ಟ ತಾಲ್ಲೂಕಿನ ಮೇಲೂರಿನಲ್ಲಿ ಮಂಗಳವಾರ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀರಾಮ ಭಜನೆ ಮಂಡಳಿಯ ಭಕ್ತ ವೃಂದದಿಂದ ಸೀತಾರಾಮ ಲಕ್ಷ್ಮಣ ಆಂಜನೇಯ ರಥೋತ್ಸವ ಆಚರಿಸಲಾಯಿತು.